ಅಕ್ರಮ ಆಸ್ತಿ ಗಳಿಕೆ ಆರೋಪ: ಸುಖ ನಿದ್ದೆಯಲ್ಲಿದ್ದವರಿಗೆ ‘ಲೋಕಾ’ ಶಾಕ್; ರಾಮನಗರ, ಬೀದರ್ ಸೇರಿದಂತೆ ಹಲವೆಡೆ ದಾಳಿ, ದಾಖಲೆ ಪರಿಶೀಲನೆ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಉತ್ತರ ಕನ್ನಡ ಮತ್ತು ಬೀದರ್ ಮತ್ತು ರಾಮನಗರ ಜಿಲ್ಲೆಯ ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಾಶ್ ಆರ್. ರೇವಣಕರ್ ಅವರ ಕಾರವಾರದ ಐಶ್ವರ್ಯ ರೆಸಿಡೆನ್ಸಿಯಲ್​​ನಲ್ಲಿರುವ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಬೀದರ್​ ಜಿಲ್ಲೆಯಲ್ಲಿ ಭಾಲ್ಕಿ ಕಾರಂಜಾ ವಿಭಾಗದ ಎಲೆಕ್ಟ್ರಿಕಲ್ ಎಂಜಿನಿಯರ್​ ಶಿವಕುಮಾರ್​ ಸ್ವಾಮಿ ಅವರಿಗೆ ಸೇರಿದ ಬೀದರ್​ ನಗರದ ಅಗ್ರಿಕಲ್ಚರ್ ಕಾಲೋನಿಯಲ್ಲಿರುವ ಮನೆ, ಕಲಬುರಗಿ ನಗರದ ಎಂ.ಬಿ. ಕಾಲೋನಿಯಲ್ಲಿರುವ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ತಾಲೂಕಿನ ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ಯತೀಶ್ ಚಂದ್ರ ಅವರ ಮನೆ ಹಾಗೂ ಗ್ರಾಮ ಪಂಚಾಯತಿ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಬೆಳ್ಳಂಬೆಳಿಗ್ಗೆ ದಾಳಿ ಮಾಡಿದ್ದಾರೆ.

ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿ ಕಚೇರಿ ಹಾಗೂ ಮೈಸೂರಿನ ನಿವಾಸದ ಮೇಲೆ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ಮಾಡಿದ್ದಾರೆ. ಸುಮಾರು 5 ಕ್ಕು ಹೆಚ್ಚು ಅಧಿಕಾರಿಗಳ ತಂಡ ದಾಳಿ ಮಾಡಿದೆ.

ಗ್ರಾಮ ಪಂಚಾಯತಿ ಕಚೇರಿಯಲ್ಲಿ ಹಲವು ಕಡತಗಳನ್ನ ಪರಿಶೀಲನೆ ಮಾಡಲಾಗುತ್ತಿದೆ. ಅದೆ ರೀತಿ ಮೈಸೂರಿನ ಮನೆಯಲ್ಲು ಸಹ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ

Latest Indian news

Popular Stories