ಮೂರ್ನಾಲ್ಕು ಹಂತಗಳಲ್ಲಿ ಲೋಕಸಭೆ ಚುನಾವಣೆ ಮುಗಿಯಬೇಕಿತ್ತು: ಸುಮಾರು 70-80 ದಿನಗಳ ಕಾಲ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲುತ್ತದೆ – ಖರ್ಗೆ ಆಕ್ಷೇಪ

ಬೆಂಗಳೂರು: “ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಲ್ಲೆಡೆ ಪ್ರವಾಸ ಮಾಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ” 2024ರ ಲೋಕಸಭೆ ಚುನಾವಣೆಗೆ ಏಳು ಹಂತದ ಚುನಾವಣೆ ಘೋಷಿಸಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೇಳಿದ್ದಾರೆ.

ಇಂದು ಲೋಕಸಭೆ ಚುನಾವಣೆಯ ವೇಳಾಪಟ್ಟಿ ಪ್ರಕಟಗೊಂಡ ನಂತರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಮೂರ್ನಾಲ್ಕು ಹಂತಗಳಲ್ಲಿ ಲೋಕಸಭೆ ಚುನಾವಣೆ ಪೂರ್ಣಗೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಏನಾಗಲಿದೆ ಎಂಬ ಆತಂಕ ನಮಗಿಲ್ಲ. ಆದರೆ ಮೋದಿಜಿ ಎಲ್ಲೆಡೆ ಪ್ರವಾಸ ಮಾಡಲು ಏಳು ಹಂತಗಳನ್ನು ಹಾಕುತ್ತಿದ್ದಾರೆ ಎಂದರು.

ಈ ದೇಶದಲ್ಲಿ ನಾನು ಸುಮಾರು 12 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ ಮತ್ತು ಗರಿಷ್ಠ ನಾಲ್ಕು ಹಂತಗಳಲ್ಲಿ ಚುನಾವಣೆ ನಡೆದಿದೆ. ನಾನು ಒಂದು ಮತ್ತು ಎರಡು ಹಂತಗಳ ಚುನಾವಣೆಯನ್ನೂ ನೋಡಿದ್ದೇನೆ. ಆದರೆ ನಾಲ್ಕು ಹಂತಕ್ಕಿಂತ ಹೆಚ್ಚಾಗಿರಲಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ಏಳು ಹಂತಗಳಲ್ಲಿ ಚುನಾವಣೆ ನಡೆಸುವುದರಿಂದ ಬಹುತೇಕ ಎಲ್ಲ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳಲಿವೆ. ಸುಮಾರು 70-80 ದಿನಗಳ ಕಾಲ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಿದರೆ ದೇಶ ಹೇಗೆ ಪ್ರಗತಿ ಸಾಧಿಸುತ್ತದೆ ಎಂದು ನೀವೇ ಊಹಿಸಿ? ಎಂದರು.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ… ಸಾಮಗ್ರಿ ಪೂರೈಕೆಯಾಗುವುದಿಲ್ಲ. ಬಜೆಟ್ ಖರ್ಚು ಮಾಡಲಾಗುವುದಿಲ್ಲ. ಹಾಗಾಗಿ ನನ್ನ ಪ್ರಕಾರ ಇದು ಒಳ್ಳೆಯದಲ್ಲ. ಮೂರ್ನಾಲ್ಕು ಹಂತಗಳಲ್ಲಿ ಪೂರ್ಣಗೊಳಿಸಬಹುದಿತ್ತು ಎಂದರು.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಇಂದು 2024 ರ ಲೋಕಸಭೆ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.

Latest Indian news

Popular Stories