ಮಣಿಪುರ: ಹೈಕೋರ್ಟಿನಲ್ಲಿ ಕುಕಿ-ಝೋ ಶಿಕ್ಷಣ ತಜ್ಞರ ಪರ ವಕಾಲತ್ತು ವಹಿಸಿದ ವಕೀಲರ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ, ಧ್ವಂಸ!

ಗುವಾಹಟಿ: ಮಣಿಪುರ ಹೈಕೋರ್ಟಿನಲ್ಲಿ ಕುಕಿ-ಝೋ ಶಿಕ್ಷಣ ತಜ್ಞರನ್ನು ಪ್ರತಿನಿಧಿಸಿದ್ದಕ್ಕಾಗಿ ಇಂಫಾಲ್‌ನಲ್ಲಿ ಮೈಟಿ ವಕೀಲರೊಬ್ಬರ ಮನೆ ಮೇಲೆ ಗುಂಪೊಂದು ದಾಳಿ ನಡೆಸಿ, ಧ್ವಂಸಗೊಳಿಸಿದೆ. ಸೊರೈಶಮ್ ಚಿತ್ತರಂಜನ್ ಅವರ ಮನೆಯ ಮೇಲೆ ಶುಕ್ರವಾರ ದಾಳಿ ನಡೆದಿದೆ.

ವೈಯಕ್ತಿಕ ಕಾರಣ ಉಲ್ಲೇಖಿಸಿ ಕುಕಿ-ಝೋ ಶಿಕ್ಷಣತಜ್ಞ ಪ್ರೊ.ಖಾಮ್ ಖಾನ್ ಸುವಾನ್ ಹೌಸಿಂಗ್ ಅವರ ಪರ ನ್ಯಾಯಾಲಯದಲ್ಲಿ ಹಾಜರಾಗದಿರಲು ಸೊರೈಶಮ್ ಚಿತ್ತರಂಜನ್ ಹಾಗೂ ಮತ್ತಿಬ್ಬರು ವಕೀಲರು  ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ. 

ವಕೀಲರ ಮನವಿಯನ್ನು ಹೈಕೋರ್ಟ್‌ನ ನ್ಯಾಯಮೂರ್ತಿ ಎ ಗುಣೇಶ್ವರ್ ಶರ್ಮಾ ಸ್ವೀಕರಿಸಿದ್ದಾರೆ. ಮಣಿಪುರದಲ್ಲಿ ನಡೆದ ಮತೀಯ ಹಿಂಸಾಚಾರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಹೌಸಿಂಗ್ ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸುತ್ತಿದ್ದಾರೆ. ಜುಲೈನಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಹಿರಿಯ ವಕೀಲ ಆನಂದ್ ಗ್ರೋವರ್ ಪ್ರಕರಣವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೈಕೋರ್ಟ್‌ನ ಕೆಲವು ವಕೀಲರು ತಿಳಿಸಿದ್ದಾರೆ. ಚಿತ್ತರಂಜನ್ ಪಾತ್ರ ದಾಖಲೆಗಳನ್ನು ಸಲ್ಲಿಸುವುದಕ್ಕಷ್ಟೇ ಸೀಮಿತವಾಗಿತ್ತು. ಹೌಸಿಂಗ್ ಪರ ವಕೀಲರ ಮನೆ ಧ್ವಂಸ ಹಾಗೂ ಬೆದರಿಕೆಯನ್ನು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ಖಂಡಿಸಿದೆ. 

ಪ್ರಕರಣದಿಂದ ಹಿಂದೆ ಸರಿದಿದ್ದರೂ, ಗುಂಪೊಂದು ವಕೀಲರ ನಿವಾಸವನ್ನು ಧ್ವಂಸಗೊಳಿಸಿದೆ. ತಮ್ಮದೇ ಸಮುದಾಯದ ಸದಸ್ಯರಿಂದ ವಕೀಲರಿಗೆ ಬೆದರಿಕೆಗಳು ಮೈಟಿ ಸಮುದಾಯದಲ್ಲಿನ ಅಸಹಿಷ್ಣುತೆ ತೋರಿಸುತ್ತವೆ. ಹೌಸಿಂಗ್ ಅವರು ನ್ಯಾಯಾಲಯದಲ್ಲಿ ತನ್ನನ್ನು ಸಮರ್ಥಿಸಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ ಮತ್ತು ವಕೀಲರು ಪ್ರಕರಣದಲ್ಲಿ ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸಂಸ್ಥೆ ಹೇಳಿದೆ.

Latest Indian news

Popular Stories