“ಸನಾತನ ಧರ್ಮ ಮಲೇರಿಯಾ,ಡೆಂಗ್ಯೂ ಇದ್ದಂತೆ” | “ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ” – ಸಚಿವ ಉದಯನಿಧಿ ಸ್ಟ್ಯಾಲಿನ್

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ಶನಿವಾರ(ಸೆ.2 ರಂದು) ಸನಾತನ ಧರ್ಮವನ್ನು “ಡೆಂಗ್ಯೂ” ಮತ್ತು “ಮಲೇರಿಯಾ” ಕ್ಕೆ ಹೋಲಿಸಿ ಕೊಟ್ಟ ಹೇಳಿಕೆಗೆ ಬಿಜೆಪಿ ಭಾರೀ ಆಕ್ರೋಶ ವ್ಯಕ್ತ ಪಡಿಸಿದೆ.

ಸನಾತನ ನಿರ್ಮೂಲನಾ ಸಮಾವೇಶದಲ್ಲಿ ಮಾತನಾಡಿರುವ  ಸಚಿವ ಉದಯನಿಧಿ ಸ್ಟಾಲಿನ್ “ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ” ಎಂದಿದ್ದಾರೆ.

ಕೆಲ ವಿಷಯಗಳನ್ನು ವಿರೋಧಿಸಲು ಆಗುವುದಿಲ್ಲ. ಅವುಗಳನ್ನು ನಿರ್ಮೂಲನೆ ಮಾಡಿದರೆ ಮಾತ್ರ ಅದು ನಾಶವಾಗಬಹುದು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕರೋನಾವನ್ನು ವಿರೋಧಿಸಲು ಸಾಧ್ಯವಿಲ್ಲ. ಅದೇ ರೀತಿ ನಾವು ಸನಾತನವನ್ನು ನಿರ್ಮೂಲನೆ ಮಾಡಬೇಕು” ಎಂದು ಹೇಳಿದ್ದಾರೆ.

“ಸನಾತನವನ್ನು ವಿರೋಧಿಸುವುದಕ್ಕಿಂತ, ಅದನ್ನು ನಾವು ನಿರ್ಮೂಲನೆ ಮಾಡಬೇಕು. ‘ಸನಾತನ’ ಎನ್ನುವ ಪದ ಸಂಸ್ಕೃತದಿಂದ ಬಂದಿದೆ. ಇದು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ವಿರೋಧಿಯಾಗಿದೆ” ಎಂದು ಆಡಳಿತಾರೂಢ ಡಿಎಂಕೆ ಸರ್ಕಾರದಲ್ಲಿ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವರಾಗಿರುವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.

ಸದ್ಯ ಉದಯನಿಧಿ ಸ್ಟ್ಯಾಲಿನ್ ಅವರ ಹೇಳಿಕೆ ಬಿಜೆಪಿಯಿಂದ ಆಕ್ರೋಶ ವ್ಯಕ್ಯವಾಗಿದ್ದು, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಸ್ಟ್ಯಾಲಿನ್ ಹೇಳಿಕೆಯನ್ನು ಖಂಡಿಸಿ, “ಸನಾತನವನ್ನು ಹಿಂಬಾಲಿಸುವ 80% ಜನ ಸಂಖ್ಯೆಯ ನರಮೇಧಕ್ಕೆ ಕರೆ ನೀಡುತ್ತಿದ್ದಾರೆ” ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.

ಡಿಎಂಕೆ ‘ಇಂಡಿಯಾ’ ಮೈತ್ರಿಕೂಟದ ಪಕ್ಷವಾಗಿದ್ದು, ಮುಂಬಯಿ ಸಭೆಯಲ್ಲಿ ‘ಸನಾತನ’ದ ನಿರ್ಮೂಲನೆ ಬಗ್ಗೆ ಚರ್ಚಿಸಲಾಗಿದೆಯೇ? ಎಂದು ಅಮಿತ್ ಮಾಳವೀಯ ಅವರು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸ್ಟ್ಯಾಲಿನ್ “ನಾನು ಎಲ್ಲೂ ಕೂಡ ಸನಾತನವನ್ನು ಹಿಂಬಾಲಿಸುವವರ ನರಮೇಧಕ್ಕೆ ಕರೆ ನೀಡಿಲ್ಲ. ನನ್ನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ಕಾನೂನು ಸವಾಲುಗಳನ್ನು ಎದುರಿಸಲು ಸಿದ್ಧನಿದ್ದೇನೆ. ಕೇಸರಿ ಪಡೆಯ ಇಂತಹ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ಪೆರಿಯಾರ್, ಅಣ್ಣಾ ಮತ್ತು ಕಲೈಂಜರ್ ಅವರ ಅನುಯಾಯಿಗಳಾದ ನಾವು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಮತ್ತು ಸಮಾನತೆಯ ಸಮಾಜವನ್ನು ಸ್ಥಾಪಿಸಲು ಶಾಶ್ವತವಾಗಿ ಹೋರಾಡುತ್ತೇವೆ  ಎಂಕೆ ಸ್ಟಾಲಿನ್ ಅವರ ನೇತೃತ್ವದಲ್ಲಿ ಡಿಎಂಕೆ ಸರ್ಕಾರ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಮತ್ತು ಸಮಾನತೆಯ ಸಮಾಜವನ್ನು ಸ್ಥಾಪಿಸಲು ಹೋರಾಡುತ್ತದೆ ಎಂದು ಅವರು ಹೇಳಿದ್ದಾರೆ.

Latest Indian news

Popular Stories