ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ವೀಡಿಯೋ ಪ್ರಕರಣ: 4 ಮಂದಿ ಬಂಧನ

ಇಂಫಾಲ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ನಗ್ನಗೊಳಿಸಿ ಪರೇಡ್ ಮಾಡಿದ ಪ್ರಕರಣದಲ್ಲಿ ಮತ್ತೋರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. 

ಈ ವರೆಗೂ ಪ್ರಕರಣದಲ್ಲಿ ಒಟ್ಟು ನಾಲ್ಕು ಮಂದಿಯನ್ನು ಬಂಧಿಸಲಾಗಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ತೌಬಲ್ ಜಿಲ್ಲೆ ಜಿಲ್ಲೆಯಲ್ಲಿ ಹುಯಿರೆಮ್ ಹೆರದಾಸ್ ಸಿಂಗ್ ಎಂಬಾತನನ್ನು ಬಂಧಿಸಲಾಗಿತ್ತು.

ವೈರಲ್ ಆಗಿದ್ದ ವೀಡಿಯೋದಲ್ಲಿ, ಹಸಿರು ಟೀ ಶರ್ಟ್ ಧರಿಸಿದ್ದ ವ್ಯಕ್ತಿ, ಮಹಿಳೆಯೊಬ್ಬರನ್ನು ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಅಪರಾಧ ನಡೆದದ್ದು ಹಾಗೂ ಅದು ಬಹಿರಂಗವಾಗಿದ್ದರ ನಡುವಿನ ಅಂತರ ದೀರ್ಘವಾಗಿದ್ದು, ಪ್ರಕರಣ ದಾಖಲಾಗಿ 70ಕ್ಕೂ ಹೆಚ್ಚು ದಿನಗಳು ಕಳೆದರೂ ಕ್ರಮ ಕೈಗೊಳ್ಳುವಲ್ಲಿ ವಿಫಲರಾದ ಪೊಲೀಸರ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ. 

ಈ ದೌರ್ಜನ್ಯವೇ ಮಹಿಳೆಯರ ಮೇಲಿನ ಕೊನೆಯ ದೌರ್ಜನ್ಯವಾಗಬೇಕು, ನಾವು ನಮ್ಮ ಸಹೋದರಿಯರು, ತಾಯಂದಿರನ್ನು ಗೌರವಿಸಬೇಕು ಎಂದು ಸಿಎಂ ಹೇಳಿದ್ದಾರೆ.

ಬಂಧಿತ ಹುಯಿರೆಮ್ ಹೆರದಾಸ್ ಸಿಂಗ್ ಮನೆಯನ್ನು ಸ್ಥಳೀಯರು ಬೆಂಕಿಗೆ ಆಹುತಿ ನೀಡಿದ್ದು, ಮಹಿಳೆಯರ ಮೇಲಿನ ದೌರ್ಜನ್ಯವನ್ನು ಸ್ಥಳೀಯ ಮಹಿಳೆಯರು ಖಂಡಿಸಿದ್ದಾರೆ. ಈ ಘಟನೆಯ ವೀಡಿಯೋ ಸಹ ಈಗ ವೈರಲ್ ಆಗತೊಡಗಿದೆ.
 
ವೈರಲ್ ಆಗಿರುವ ವೀಡಿಯೋ ಅತ್ಯಂತ ಖಂಡನೀಯ. ಎಲ್ಲಾ ಮಹಿಳೆಯರನ್ನೂ ಗೌರವಿಸಬೇಕು. ಅದು ಕುಕಿಗಳು, ಮೈಟೀಸ್ ಅಥವಾ ಮುಸ್ಲಿಮರು ಯಾರಾದರೂ ಆಗಿರಲಿ, ಯಾವ ಮಹಿಳೆ ಮೇಲೆ ದೌರ್ಜನ್ಯವಾದರೂ ಅದು ಖಂಡನೀಯ. ಈ ರೀತಿಯ ಘಟನೆಗಳು ಮರುಕಳಿಸದಂತೆ ಸರ್ಕಾರ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಸ್ಥಳೀಯ ಮಹಿಳೆಯೊಬ್ಬರು ಹೇಳಿದ್ದಾರೆ. 

Latest Indian news

Popular Stories