ಉತ್ತರಾಧಿಕಾರಿ ಸ್ಥಾನದಿಂದ ಸೋದರಳಿಯ ಆಕಾಶ್ ಆನಂದ್ ನನ್ನು ತೆಗೆದುಹಾಕಿದ ಮಾಯಾವತಿ

ಲಖನೌ: ಲೋಕಸಭೆ ಚುನಾವಣೆಯ ಸಮಯದಲ್ಲೇ ನಡೆದ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಮಂಗಳವಾರ ತಮ್ಮ ಸೋದರಳಿಯ ಆಕಾಶ್ ಆನಂದ್(28) ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ಮತ್ತು ತಮ್ಮ ಉತ್ತರಾಧಿಕಾರಿ ಸ್ಥಾನದಿಂದ ತೆಗೆದುಹಾಕಿದ್ದಾರೆ.

ಈ ಕುರಿತು ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿರುವ ಮಾಯಾವತಿ, “ಪಕ್ಷ ಮತ್ತು ಬಹುಜನ ಚಳುವಳಿಯ ಹಿತಾಸಕ್ತಿಯಿಂದ, ಪಕ್ಷದ ರಾಷ್ಟ್ರೀಯ ಸಂಯೋಜಕ ಮತ್ತು ನನ್ನ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದ ಆಕಾಶ್ ಆನಂದ್ ಅವರನ್ನು ಪೂರ್ಣ ಪ್ರಬುದ್ಧತೆ ಬರುವವರೆಗೆ ಎರಡೂ ನಿರ್ಣಾಯಕ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಬಿಜೆಪಿಯನ್ನು ತಾಲಿಬಾನ್‌ಗೆ ಹೋಲಿಸಿದ ಕೆಲವು ದಿನಗಳ ನಂತರ 28 ವರ್ಷದ ಆಕಾಶ್ ಆನಂದ್ ಅವರನ್ನು ಎರಡು ಪ್ರಮುಖ ಹುದ್ದೆಗಳಿಂದ ವಜಾಗೊಳಿಸಲಾಗಿದೆ. ಅಲ್ಲದೆ ಆಕಾಶ್​ ಇನ್ನೂ ಅಪ್ರಬುದ್ಧ ಎಂದು ಬಿಎಸ್​ಪಿ ನಾಯಕಿ ಹೇಳಿದ್ದಾರೆ.

ಬಿಎಸ್‌ಪಿ ಕೇವಲ ಒಂದು ಪಕ್ಷವಲ್ಲ, ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರ ಸ್ವಾಭಿಮಾನ ಮತ್ತು ಸಾಮಾಜಿಕ ಬದಲಾವಣೆಯ ಚಳುವಳಿಯಾಗಿದೆ. ಇದಕ್ಕಾಗಿ ಕಾನ್ಶಿ ರಾಮ್ ಜಿ ಮತ್ತು ನಾನು ನಮ್ಮ ಸಂಪೂರ್ಣ ಜೀವನವನ್ನು ಮುಡಿಪಾಗಿಟ್ಟೆವು. ಹೊಸ ಪೀಳಿಗೆಯು ಇದಕ್ಕೆ ವೇಗವನ್ನು ನೀಡಲು ಸಿದ್ಧವಾಗುತ್ತಿದೆ. ಆ ನಿಟ್ಟಿನಲ್ಲಿ ಪಕ್ಷದಲ್ಲಿ ಇತರರ ಜೊತೆಗೆ, ಆಕಾಶ್ ಆನಂದ್ ಅವರನ್ನು ರಾಷ್ಟ್ರೀಯ ಸಂಯೋಜಕ ಮತ್ತು ನನ್ನ ಉತ್ತರಾಧಿಕಾರಿ ಎಂದು ಘೋಷಿಸಲಾಯಿತು. ಆದರೆ ಅವರು ಪಕ್ಷ ಮತ್ತು ಚಳುವಳಿಯ ಹಿತಾಸಕ್ತಿಯಿಂದ ಅವರು ಪೂರ್ಣ ಪ್ರಬುದ್ಧತೆಯನ್ನು ಪಡೆಯುವವರೆಗೆ ಈ ಎರಡು ಪ್ರಮುಖ ಜವಾಬ್ದಾರಿಗಳನ್ನು ನೀಡಲಾಗುವುದಿಲ್ಲ ಎಂದು ಮಾಯಾವತಿ ಅವರು ಎಕ್ಸ್​ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಆದರೆ, ಆಕಾಶ್​ ತಂದೆ ಆನಂದ್ ಕುಮಾರ್ ಅವರು ಪಕ್ಷದಲ್ಲಿ ತಮ್ಮ ಜವಾಬ್ದಾರಿಯನ್ನು ಮುಂದುವರಿಸಲಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ತ್ಯಾಗ, ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರ ಗುರಿಯನ್ನು ಮುನ್ನಡೆಸಲು ಬಿಎಸ್‌ಪಿ ನಾಯಕತ್ವ ಹಿಂದೆ ಸರಿಯುತ್ತಿಲ್ಲ ಎಂದು ಮಾಯಾವತಿ ಹೇಳಿದ್ದಾರೆ.

Latest Indian news

Popular Stories