ಸಚಿವ ಎಂ ಬಿ ಪಾಟೀಲಗೆ ಶಾಸಕ ಯತ್ನಾಳ ಸವಾಲ್: ಯಾವ ವಿಡಿಯೋ ಬಿಡುಗಡೆ ಮಾಡುತ್ತಾರೋ ಮಾಡಲಿ

ವಿಜಯಪುರ : ಸಚಿವ ಎಂ.ಬಿ. ಪಾಟೀಲರ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೆ ಗುಡುಗಿದ್ದಾರೆ. ಅಧಿಕಾರ ಬಂದ ಮೇಲೆ ಎಂ.ಬಿ. ಪಾಟೀಲ ಬದಲಾಗಿದ್ದಾರೆ, ಅವರ ವರ್ತನೆಯಲ್ಲಿ ಬದಲಾವಣೆಯಾಗಿದೆ, ಅವರು ಏನು ಮಾಡುತ್ತಾರೋ ಮಾಡಲಿ, ಯಾವ ವಿಡಿಯೋ ಬಿಡುಗಡೆ ಮಾಡುತ್ತಾರೋ ಮಾಡಲಿ ಎಂದು ಯತ್ನಾಳ ಸವಾಲು ಹಾಕಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಹಿಂದೆ ಭ್ರಷ್ಟಾಚಾರದ ಬಗ್ಗೆ ನೇರವಾಗಿಯೇ ಆಪಾದನೆ ಮಾಡಿದ್ದೇನೆ, ನಾನು ನೀಡಿರುವ ಹೇಳಿಕೆ ಮಾಧ್ಯಮದವರ ಬಳಿಯೂ ಇದೆ, ಅವರ ಹತ್ತಿರ ಏನಿದೆ ಅದನ್ನು ಬಿಡುಗಡೆ ಮಾಡಲಿ ನೋಡೋಣ ಎಂದು ಸವಾಲು ಹಾಕಿದರು.
ಗುತ್ತಿಗೆದಾರರ ವಿರುದ್ಧ ಎಫ್ಐಆರ್ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿದ ಅವರು, ಒಂದು ರೀತಿ ಸರ್ಕಾರ ಬ್ಲಾಕ್ಮೇಲ್ ರಾಜಕಾರಣ, ಹೆದರಿಸಿ ದಮನಿಸುವ ರಾಜಕಾರಣ ಮಾಡುತ್ತಿದೆ, ಪೊಲೀಸ್ ಕಂಪ್ಲೇಟ್ ಹೆಸರಿನಲ್ಲಿ ಭಯವನ್ನು ಹುಟ್ಟಿಸುವ ಕೆಲಸ ಮಾಡುತ್ತಿದೆ ಎಂದರು.
ಯಾವ ಗುತ್ತಿಗೆದಾರರು ಕೆಲಸ ಮಾಡದೇ ಬಿಲ್ ತೆಗೆದುಕೊಂಡಿದ್ದರೆ ಅದರ ವಿರುದ್ಧ ಕ್ರಮ ಕೈಗೊಳ್ಳಿ ಅದಕ್ಕೆ ನಮ್ಮ ಬೆಂಬಲವೂ ಇದೆ, ನಮ್ಮ ಬಗ್ಗೆ ಯಾವುದೇ ಭ್ರಷ್ಟಾಚಾರ ಆರೋಪ ಇದ್ದರೆ ಅದನ್ನು ತನಿಖೆ ಮಾಡಲಿ, ನಮ್ಮದು ಒಂದು ಬಾರಿ ಗಂಗಾ ನದಿ ತರಹ ಸ್ವಚ್ಛ ಆಗಲಿ ನಮ್ಮಲ್ಲಿಯೂ ಯಾರಾದರೂ ಭ್ರಷ್ಟರು ಇದ್ದರೆ ಅವರಿಗೂ ಶಿಕ್ಷೆಗೊಳಪಡಿಸಿ, ತನಿಖೆಯನ್ನು ತ್ವರಿತಗತಿಯಲ್ಲಿ ಮಾಡಿ ಹೊರತು ಮರ್ನಾಲ್ಕು ತಿಂಗಳು ಎಳೆಯಬೇಡಿ ಎಂದರು.


ಬಿ.ಎಸ್. ಯಡಿಯೂರಪ್ಪ ಅವರ ಪುತ್ರನ ಬಗ್ಗೆ ನಾನು ಏನು ಮಾತನಾಡಿದ್ದೇನೆ ಅದನ್ನ ಮಾಧ್ಯಮದವರು ತೋರಿಸಿದ್ದಾರೆ, ಈಗ ವಿನಾಕಾರಣ ಬಿಜೆಪಿ ನಾಯಕರ ಬಾಯಿ ಮುಚ್ಚಿಸಲು ಈ ಹೇಳಿಕೆಯನ್ನು ಪ್ರಸ್ತಾಪಿಸುತ್ತಿದ್ದಾರೆ. ನಿಮಗೆ ಧಮ್, ತಾಕತ್ತ ಇದ್ದರೆ ತನಿಖೆ ನಡೆಸಿ ಎಂದು ಗುಡುಗಿದರು.

ಕಾಂಗ್ರೆಸ್ ಒಂದು ರಾಕ್ಷಸ ಸಂತಂತಿ:
ಕಾಂಗ್ರೆಸ್ ತಳಿ ರಾಕ್ಷಸರದ್ದು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಶಾಸಕ ಯತ್ನಾಳ, ಬಿಜೆಪಿಗೆ ಓಟು ಹಾಕಿದವರು ರಾಕ್ಷಸರು ಎಂದ ಸುರ್ಜೆವಾಲಾ ಹೇಳಿಕೆಗೆ ಯತ್ನಾಳ್ ತಿರುಗೇಟು ನೀಡಿದರು.
ಕಾಂಗ್ರೆಸ್ ವಂಶಪಾರಂಪರೆಯ ಹಿನ್ನೆಲೆ ಸರಿಯಿಲ್ಲ, ಕಾಂಗ್ರೆಸ್ನದ್ದು ಒಂದು ರೀತಿ ಹೈಬ್ರೀಡ್ ತಳಿ, ಬಿಜೆಪಿಗೆ ಓಟು ಹಾಕಿದವರು ರಾಕ್ಷಸರು ಎನ್ನುವ ಮೂಲಕ ಕಾಂಗ್ರೆಸ್ ಉಸ್ತುವಾರಿ ದೇಶದ ಮತದಾರರನ್ನೇ ಅವಮಾನ ಮಾಡಿದ್ದಾರೆ ಎಂದರು.


ಡಿಸಿಎಂ ಡಿ.ಕೆ. ಶಿವಕುಮಾರ ಸಿ.ಎಂ. ಆಗುವುದೇ ಇಲ್ಲ, ಇದೀಗ್ ಡಿಕೆಶಿ ಸೂಪರ್ ಸಿಎಂ ಆಗಿದ್ದಾರೆ, ಆದ್ರೇ, ಯಾವ ಕಾಲಕ್ಕೂ ಡಿಕೆ ಶಿವಕುಮಾರ್ ಸಿಎಂ ಆಗಲ್ಲ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬಹಳ ನೋವಿದೆ, ಇದೀಗ ಸುಮ್ಮನೆ ಸಿಎಂ ಹುದ್ದೆಯಲ್ಲಿ ಸಿದ್ಧರಾಮಯ್ಯ ಇದ್ದಾರೆ ಹೊರತು ಸೂಪರ್ ಸಿ.ಎಂ. ಡಿಕೆಶಿ, ಎಲ್ಲ ಆಡಳಿತ ಡಿ.ಕೆ. ಶಿವಕುಮಾರ ಮಾಡುತ್ತಿದ್ದಾರೆ ಎಂದರು.

Latest Indian news

Popular Stories