ಸೋನಿಪತ್: ಸುಮಾರು 20 ಜನರ ಗುಂಪು ಮಸೀದಿಯ ಮೇಲೆ ದಾಳಿ ಮಾಡಿ ಅಲ್ಲಿ ನಮಾಜ್ ನಿರ್ವಹಿಸುತ್ತಿದ್ದ ಜನರ ಮೇಲೆ ಹಲ್ಲೆ ಮಾಡಿದೆ.
ಹರಿಯಾಣದ ಸೋನಿಪತ್‌ನ ಸ್ಯಾಂಡಲ್ ಕಲಾನ್ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದೆ. ದಾಳಿಕೋರರು ಅದೇ ಹಳ್ಳಿಯ ಸ್ಥಳೀಯರು ಎಂದು ಹೇಳಲಾಗಿದೆ.
ಸುಮಾರು 15-20 ಶಸ್ತ್ರಸಜ್ಜಿತ ದುಷ್ಕರ್ಮಿಗಳು ತಮ್ಮ ಕೈಯಲ್ಲಿ ಲಾಠಿಗಳನ್ನು (ಬಿದಿರಿನ ಕೋಲುಗಳು) ಹೊತ್ತುಕೊಂಡು ಹಳ್ಳಿಯ ಬೀದಿಗಳಲ್ಲಿ ಸಂಚರಿಸುವ ಚಿತ್ರಗಳು ವೈರಲಾಗಿವೆ. ಅವರು ಹಳ್ಳಿಯಲ್ಲಿ ಸಮುದಾಯವು ನಿರ್ಮಿಸಿದ ಸಣ್ಣ ಮಸೀದಿಯಲ್ಲಿ ರಂಜಾನ್ ಪ್ರಾರ್ಥನೆ ಸಲ್ಲಿಸುತ್ತಿದ್ದ ಜನರ ಮೇಲೆ ದಾಳಿ ಮಾಡಿದ್ದಾರೆ. ಘಟನೆಯ ಹಿಂದಿನ ಕಾರಣ ಸ್ಪಷ್ಟವಾಗಿಲ್ಲ. ಘಟನೆಯಲ್ಲಿ ಒಂಬತ್ತು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. 19 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಈ ಪ್ರಕರಣದಲ್ಲಿ 16 ಜನರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸೋನಿಪತ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.