ರಾಮನಗರದ ಹಂದಿಗುಂದಿ ಬೆಟ್ಟ ಹತ್ತಿದ ‘Monkey Man’ ಖ್ಯಾತಿಯ ಜ್ಯೋತಿರಾಜ್ – ಅರಣ್ಯ ಇಲಾಖೆ ತರಾಟೆ

ರಾಮನಗರ: ಅನುಮತಿ ಪಡೆಯದೆ ರಾಮನಗರದ ಹಂದಿಗುಂದಿ ಬೆಟ್ಟವನ್ನು ಹತ್ತಲು ಯತ್ನಿಸಿದ ‘Monkey Man’ ಖ್ಯಾತಿಯ ಜ್ಯೋತಿರಾಜ್ ನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಹಂದಿಗುಂದಿ ಬೆಟ್ಟ ಹತ್ತಲು ಅನುಮತಿ ನೀಡುವಂತೆ ಕೆಲ ದಿನಗಳ ಹಿಂದೆ ಜ್ಯೋತಿರಾಜ್ ಅರಣ್ಯ ಇಲಾಖೆಯನ್ನು ಕೋರಿದ್ದರು. ಇದಕ್ಕೆ ಇಲಾಖೆ ಸುರಕ್ಷತೆಯ ದೃಷ್ಟಿಯಿಂದ ಮೊದಲು ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಯ ಅನುಮತಿ ಸಹ ಪಡೆಯುವಂತೆ ಎಂದು ಸಲಹೆ ನೀಡಿತ್ತು. ಇದ್ಯಾವುದನ್ನು ಲೆಕ್ಕಿಸದೆ ಏಕಾಂಗಿಯಾಗಿ ಬೆಟ್ಟ ಹತ್ತಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಅಧಿಕಾರಿಗಳು ಸ್ಥಳಕ್ಕೆ ಬರುವ ವೇಳೆಗೆ ಜ್ಯೋತಿರಾಜ್ 560 ಮೀಟರ್ ಎತ್ತರದ ಹಂದಿಗುಂದಿ ಬೆಟ್ಟವನ್ನು ಮುಕ್ಕಾಲುಭಾಗ ಹತ್ತಿದ್ದರು. ಈ ವೇಳೆ ಅಧಿಕಾರಿಗಳು ಕರೆ ಮಾಡಿ ಇಳಿಯುವಂತೆ ಸೂಚಿಸಿದ್ದಾರೆ. ಇದಕ್ಕೆ ಜ್ಯೋತಿರಾಜ್ ಬೆಟ್ಟವನ್ನು ಸಂಪೂರ್ಣವಾಗಿ ಹತ್ತಿ ಇಳಿಯುದಾಗಿ ಹೇಳಿದ್ದಾರೆ.

ಬೆಟ್ಟ ಹತ್ತಿ ಇಳಿದ ನಂತರ ಅಧಿಕಾರಿಗಳು ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎನ್ನಲಾಗಿದೆ. ಇನ್ನು ಬೆಟ್ಟ ಹತ್ತುವಾಗ ಮೊಬೈಲ್‌ನಲ್ಲಿ ಜ್ಯೋತಿರಾಜ್ ಸೆರೆ ಹಿಡಿದಿದ್ದ ಫೋಟೋಗಳನ್ನು ಡಿಲೀಟ್‌ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.

Latest Indian news

Popular Stories