ಮಧ್ಯ ಪ್ರದೇಶದಲ್ಲಿ ಬಿಜೆಪಿಗೆ ವರದಾನ ವಾದ 7% ಮತ – ಈ ವರದಿ ಓದಿ ಎಲ್ಲವೂ ಅರ್ಥವಾಗುತ್ತೆ!

ಹೊಸದಿಲ್ಲಿ: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಜಯದ ಹಿಂದೆ ಆ ಶೇ.7ರಷ್ಟು ಮತಗಳು ನಿರ್ಣಾಯಕ ಪಾತ್ರ ವಹಿಸಿದ್ದವು ಎನ್ನುತ್ತವೆ ಚುನಾವಣ ಆಯೋಗದ ದತ್ತಾಂಶ!

ಹೌದು, 2018ರಲ್ಲಿ ಬಿಜೆಪಿಯು ಮಧ್ಯಪ್ರದೇಶದಲ್ಲಿ ಶೇ.41.02ರಷ್ಟು ಮತಗಳನ್ನು ಪಡೆದಿತ್ತು. ಈ ಬಾರಿ ಇದು ಶೇ.48.55ಕ್ಕೇರಿಕೆಯಾಗಿದೆ. ಅಂದರೆ ಕಮಲ ಪಕ್ಷದ ಬುಟ್ಟಿಗೆ ಹೆಚ್ಚುವರಿಯಾಗಿ ಶೇ.7ರಷ್ಟು ಮತಗಳು ಬಿದ್ದಿವೆ. ಕಾಂಗ್ರೆಸ್‌ನ ಮತ ಹಂಚಿಕೆಯನ್ನು ನೋಡಿದರೆ, 2018ಕ್ಕೆ (ಶೇ.40.89) ಹೋಲಿಸಿದರೆ ಕಾಂಗ್ರೆಸ್‌ನ ಮತಗಳ ಪ್ರಮಾಣದಲ್ಲಿ ಈ ಬಾರಿ(ಶೇ.40.40) ದೊಡ್ಡ ಮಟ್ಟದ ಬದಲಾವಣೆಯೇನೂ ಆಗಿಲ್ಲ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ 114 ಸೀಟುಗಳಲ್ಲಿ ಗೆದ್ದರೆ, ಈ ಬಾರಿ 66 ಸೀಟುಗಳಿಗೆ ತೃಪ್ತಿಪಟ್ಟುಕೊಂಡಿದೆ. ಬಿಜೆಪಿ 163ರಲ್ಲಿ ಗೆದ್ದು ಬೀಗಿದೆ.

ಹೆಚ್ಚುವರಿಯಾಗಿ ದೊರೆತ ಶೇ.7 ಮತಗಳೇ ಬಿಜೆಪಿಯನ್ನು 2018ರಲ್ಲಿದ್ದ 109 ಸೀಟುಗಳಿಂದ 163ಕ್ಕೆ ತಂದು ನಿಲ್ಲಿಸಿವೆ. ಗೆಲುವಿಗೆ ಅತ್ಯಂತ ನಿರ್ಣಾಯಕವಾಗಿದ್ದ ಮಾಲ್ವಾ-ನಿಮಾರ್‌ ಮತ್ತು ಗ್ವಾಲಿಯರ್‌-ಛಂಬಲ್‌ ಪ್ರದೇಶಗಳಲ್ಲಿ ಬಿಜೆಪಿಗೆ ಅತೀ ಹೆಚ್ಚು ಮತಗಳು ಬಿದ್ದಿದ್ದೇ ಪಕ್ಷದ ಭರ್ಜರಿ ಯಶಸ್ಸಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಮಾಲ್ವಾ ನಿಮಾರ್‌ನಲ್ಲಿ 66 ಕ್ಷೇತ್ರಗಳ ಪೈಕಿ 48ರಲ್ಲಿ ಬಿಜೆಪಿ ಜಯ ಸಾಧಿಸಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಇಲ್ಲಿ 20 ಹೆಚ್ಚುವರಿ ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಇನ್ನು, ಗ್ವಾಲಿಯರ್‌-ಛಂಬಲ್‌ನ ಒಟ್ಟು 34 ಕ್ಷೇತ್ರಗಳ ಪೈಕಿ ಅರ್ಧಕ್ಕೂ ಹೆಚ್ಚು ಕ್ಷೇತ್ರಗಳು ಕಮಲ ಪಕ್ಷದ ತೆಕ್ಕೆಗೆ ಬಿದ್ದಿವೆ. 2018ರಲ್ಲಿ ಇಲ್ಲಿ 26 ಕ್ಷೇತ್ರಗಳು ಕಾಂಗ್ರೆಸ್‌ ಪಾಲಾಗಿದ್ದವು. ಇದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪ್ರಾಬಲ್ಯವಿರುವ ಪ್ರದೇಶವಾಗಿದೆ.

Latest Indian news

Popular Stories