ಹಮಾಸ್-ಇಸ್ರೇಲ್ ಕುರಿತಾದ ಪೋಸ್ಟ್: ಮುಂಬೈ ಶಾಲೆಯ ಪ್ರಾಂಶುಪಾಲೆ ವಜಾ – ಕ್ರಮ “ರಾಜಕೀಯ ಪ್ರೇರಿತ” ಎಂದ ಶಿಕ್ಷಕಿ

ಹಮಾಸ್-ಇಸ್ರೇಲ್ ಸಂಘರ್ಷದ ಕುರಿತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್ ಕುರಿತು ಟೀಕೆಗೆ ಒಳಗಾದ ಕೆಲವು ದಿನಗಳ ನಂತರ ಮುಂಬೈನ ಸೋಮಯ್ಯ ಶಾಲೆಯ ಆಡಳಿತ ಮಂಡಳಿಯು ಅದರ ಪ್ರಾಂಶುಪಾಲೆ ಪರ್ವೀನ್ ಶೇಖ್ ಅವರನ್ನು ವಜಾಗೊಳಿಸಿದೆ.

ಮಂಗಳವಾರ ಸಂಜೆ ಹೊರಡಿಸಿದ ಹೇಳಿಕೆಯಲ್ಲಿ, ಶಾಲೆಯನ್ನು ನಡೆಸುತ್ತಿರುವ ಸೋಮಯ್ಯ ವಿದ್ಯಾವಿಹಾರ್, “ಇತ್ತೀಚೆಗೆ ಸೋಮಯ್ಯ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಪರ್ವೀನ್ ಶೇಖ್ ಅವರ ವೈಯಕ್ತಿಕ ಸಾಮಾಜಿಕ ಮಾಧ್ಯಮದ ಪೋಸ್ಟ್ ನಮ್ಮ ಗಮನಕ್ಕೆ ಬಂದಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನಾವು ಬಲವಾಗಿ ಬೆಂಬಲಿಸುತ್ತೇವೆ. ಆದರೂ ಅದು ಸಂಪೂರ್ಣವಲ್ಲ. ಜವಾಬ್ದಾರಿಯುತವಾಗಿ ಗೌರವದಿಂದ ಬಳಸಬೇಕೆಂದು ನಂಬುತ್ತೇವೆ. ನಮ್ಮ ಏಕತೆ ಮತ್ತು ಒಳಗೊಳ್ಳುವಿಕೆಯ ನೀತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಸೋಮಯ್ಯ ವಿದ್ಯಾವಿಹಾರ್‌ ಶ್ರೀಮತಿ ಪರ್ವೀನ್ ಶೇಖ್ ಅವರ ಒಡನಾಟವನ್ನು ನಿಲ್ಲಿಸಿದೆ…” ಎಂದು ಹೇಳಿ ವಜಾಗೊಳಿಸಿ ಆದೇಶ ಹೊರಡಿಸಿದೆ.

ಏಪ್ರಿಲ್ 24 ರಂದು ಲೇಖನ ಪ್ರಕಟವಾದ ನಂತರ, ಮ್ಯಾನೇಜ್‌ಮೆಂಟ್ ಏಪ್ರಿಲ್ 26 ರಂದು ಅವರೊಂದಿಗೆ ಸಭೆ ನಡೆಸಿ ರಾಜೀನಾಮೆ ನೀಡುವಂತೆ ಹೇಳಿದೆ. ಆದರೆ ಪ್ರಜಾಪ್ರಭುತ್ವದಲ್ಲಿ ತನ್ನ ವಾಕ್ ಸ್ವಾತಂತ್ರ್ಯವನ್ನು ಉಲ್ಲೇಖಿಸಿ ಶೇಖ್ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ಅವರು ಸಂಸ್ಥೆಯ ಉನ್ನತಿಗೆ ಪ್ರಮಾಣಿಕವಾಗಿ ದುಡಿದಿದ್ದೇನೆ ಎಂದು ಹೇಳಿದ್ದಾರೆ. ನಂತರ ಆಡಳಿತ ಮಂಡಳಿಯು ಮೇ 4 ರಂದು ಶೇಖ್ ಅವರಿಂದ ಲಿಖಿತ ವಿವರಣೆಯನ್ನು ಕೇಳಿದೆ.

ಶಾಲಾ ಆಡಳಿತ ಮಂಡಳಿಯ ಕ್ರಮವನ್ನು ಖಂಡಿಸಿದ ಪರ್ವಿನ್ ಶೇಖ್,”ತನ್ನ ನಿರಾಶೆಯನ್ನು ವ್ಯಕ್ತಪಡಿಸಿದರು. ಸೋಮಯ್ಯ ಶಾಲೆಯೊಂದಿಗೆ 12 ವರ್ಷಗಳ ಒಡನಾಟವನ್ನು ಹೊಂದಿದ್ದೆ. ಏಳು ವರ್ಷಗಳ ಹಿಂದೆ ಅದರ ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿಸಲು ಆರಂಭಿಸಿದೆ. ಆಡಳಿತ ಮಂಡಳಿ ತಿಳಿಸುವ ಮೊದಲೇ ಸಾಮಾಜಿಕ ಮಾಧ್ಯಮದಿಂದ ನನ್ನ ವಜಾಗೊಳಿಸುವ ಸುದ್ದಿಯನ್ನು ತಿಳಿದು ನಾನು ಆಘಾತಕ್ಕೊಳಗಾಗಿದ್ದೇನೆ. ವಜಾಗೊಳಿಸುವ ಸೂಚನೆಯು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ನನ್ನ ವಿರುದ್ಧ ಮಾನಹಾನಿಕರ ಸುಳ್ಳು ಸುದ್ದಿಗಳನ್ನು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಶಾಲೆಯ ಪ್ರಾಂಶುಪಾಲೆಯಾಗಿ ಶಾಲೆಗಾಗಿ ನಾನು ಪ್ರಮಾಣಿಕವಾಗಿ ದುಡಿದಿದ್ದೇನೆ‌. ನನ್ನನ್ನು ವಜಾಗೊಳಿಸಿರುವುದು ಅನ್ಯಾಯವಾಗಿದೆ ಎಂದಿದ್ದಾರೆ

“ನನ್ನ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು 12 ವರ್ಷಗಳಲ್ಲಿ ಶಾಲೆಯ ಬೆಳವಣಿಗೆಗೆ ನೀಡಿದ ಪ್ರಾಮಾಣಿಕ ಕೊಡುಗೆಯ ಹೊರತಾಗಿಯೂ, ನನ್ನ ವಿರುದ್ಧದ ಈ ಸಾರ್ವಜನಿಕ ನಿಂದನೆಯ ಅಭಿಯಾನದ ಮುಖಾಂತರ ಆಡಳಿತವು ನನ್ನ ಬೆಂಬಲಕ್ಕೆ ನಿಲ್ಲದಿರಲು ನಿರ್ಧರಿಸಿದೆ. ಆ ನಿಂದನೀಯ ಅಭಿಯಾನದ ಜೊತೆ ಶಾಲಾ ಆಡಳಿತ ಮಂಡಳಿ ನಿಂತಿರುವುದು ನಿರಾಶೆಗೊಳಿಸಿದೆ. ಈ ಕ್ರಮವು ರಾಜಕೀಯ ಪ್ರೇರಿತವಾಗಿರುವಂತೆ ತೋರುತ್ತಿದೆ. ನಾನು ನಮ್ಮ ಕಾನೂನು ವ್ಯವಸ್ಥೆ ಮತ್ತು ಭಾರತೀಯ ಸಂವಿಧಾನದಲ್ಲಿ ದೃಢವಾದ ನಂಬಿಕೆಯನ್ನು ಹೊಂದಿದ್ದೇನೆ. ಪ್ರಸ್ತುತ ಕಾನೂನು ಆಯ್ಕೆಗಳನ್ನು ಪರಿಗಣಿಸುತ್ತಿದ್ದೇನೆ ಎಂದು ಹೇಳಿದರು.

Latest Indian news

Popular Stories