ಬೈಲೂರು ಪರಶುರಾಮ ಥೀಂ ಪಾರ್ಕ್ ಪ್ರತಿಮೆ ನಕಲಿ ಸಮಗ್ರ ತನಿಖೆಗೆ ಮುನಿಯಾಲು ಉದಯ ಶೆಟ್ಟಿ ಆಗ್ರಹ

ಉಡುಪಿ: ಬೈಲೂರು ಪರಶುರಾಮ ಥೀಂ ಪಾರ್ಕ್ ಹಾಗೂ ಅಲ್ಲಿನ ಪರಶುರಾಮ ಪ್ರತಿಮೆಯ ನೈಜತೆ ಬಗ್ಗೆ ಅನುಮಾನವಿದೆ. ಈ ಬಗ್ಗೆ ಸರಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಲಿರುವ ಪರಶುರಾಮನ ಮೂರ್ತಿ ನಕಲಿ ಎಂದು ತಿಳಿದುಬಂದಿದೆ. ಹೀಗಾಗಿ ಕೂಡಲೇ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಆ ಬಳಿಕವೇ ಬಾಕಿ ಇರುವ ಕಾಮಗಾರಿ ಮುಂದುವರಿಸಬೇಕು. ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಗಾರಿ ಪೂರ್ಣಗೊಳಿಸಲು ನಮ್ಮದು ಯಾವುದೇ ತಕರಾರು ಇಲ್ಲ. ಆದರೆ ಈವರೆಗೆ ನಡೆದಿರುವ ಕಾಮಗಾರಿ ಬಗ್ಗೆ ತನಿಖೆ ಆಗಬೇಕು. ಮೂರ್ತಿಯ ನೈಜತೆಯನ್ನು ಜನರಿಗೆ ತಿಳಿಸಬೇಕು ಎಂದರು.
ಇದೊಂದು ಭಾವನಾತ್ಮಕ ವಿಚಾರ, ಧಾರ್ಮಿಕ ವಿಚಾರ. ತನಿಖೆ ಆಗುವವರೆಗೆ ಯಾವುದೇ ಕಾಮಗಾರಿ ನಡೆಸಬಾರದು. ಇದನ್ನು ಗೋಮಾಲ ಜಾಗದಲ್ಲಿ ನಿರ್ಮಿಸಿದ್ದಾರೆ. ಪಾರ್ಕ್ ಉದ್ಘಾಟನೆ ಆದ ಬಳಿಕ ಇದು ಗೋಮಾಲ ಜಾಗ ಇಲ್ಲಿ ಏನೂ ಮಾಡಬಾರದೆಂದು ಸರಕಾರದ ಅಧೀನ ಕಾರ್ಯದರ್ಶಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಡಿಸಿ ಕೂಡ ಏನೂ ಮಾಡಬಾರದು ಎಂದು ತಿಳಿಸಿದ್ದಾರೆ.
ತಹಶೀಲ್ದಾರ್ ಕೂಡ ಎರ್ಲಪಾಡಿ ಗ್ರಾಪಂಗೆ ಲಿಖಿತವಾಗಿ ಪತ್ರ ಬರೆದಿದ್ದಾರೆ ಎಂದು ಹೇಳಿದರು.ಪರಶುರಾಮ ಮೂರ್ತಿಯ ಉಮಿಕ್ಕಳ್ ಬೆಟ್ಟ ಗೊಂದಲದ ಗೂಡಾಗಿದೆ. ಪರಶುರಾಮ ಮೂರ್ತಿಯ ಮೊನ್ಕಾಲು ಗಂಟಿನವರೆಗೆ ಕಂಚಿನ ಮೂರ್ತಿಯಾಗಿದ್ದು, ಅಲ್ಲಿಂದ ಮೇಲಿನದ್ದು ನಕಲಿಯಾಗಿದೆ. ಈಗ ಕೊಡಲಿ ಹಿಡಿದದ್ದು ಸರಿಯಿಲ್ಲ, ಬಿಲ್ಲು ಹಿಡಿದದ್ದು ಸರಿಯಿಲ್ಲ ಎನ್ನುತ್ತಿದ್ದಾರೆ. ಯಾಕಂದ್ರೆ ಈಗಿರುವ ಮೂರ್ತಿಯನ್ನು ತೆಗೆದು, ಬೆಂಗಳೂರಿನಲ್ಲಿ ರೆಡಿ ಆಗುತ್ತಿರುವ ವರ್ಜಿನಲ್ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಬೇಕಿದೆ. ಅದಕ್ಕೆ ಈ ರೀತಿಯ ನೆಪವೊಡ್ಡುತ್ತಿದ್ದಾರೆ ಎಂದು ಅವರು ಆರೋಪಿಸಿದರು