ಬಿಜೆಪಿ ಸರ್ಕಾರ ಬಂದರೆ ತೆಲಂಗಾಣದಲ್ಲಿ ಮುಸ್ಲಿಮ್ ಮೀಸಲಾತಿ ರದ್ದು: ಅಮಿತ್ ಶಾ

ಹೈದರಾಬಾದ್: ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ ಮುಸ್ಲಿಮರಿಗೆ ಮೀಸಲಾತಿಯನ್ನು ರದ್ದುಪಡಿಸುವುದಾಗಿ ಕೇಂದ್ರ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ.

ಹೈದರಾಬಾದ್ ಬಳಿಯ ಚೆವೆಲ್ಲಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಧರ್ಮ ಆಧಾರಿತ ಮೀಸಲಾತಿಗಳನ್ನು ಅಸಂವಿಧಾನಿಕ ಎಂದು ಕರೆದರು.

ತೆಲಂಗಾಣದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಶೇ.4ರಷ್ಟು ಮುಸ್ಲಿಂ ಕೋಟಾವನ್ನು ರದ್ದುಪಡಿಸಲಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ಸಮುದಾಯಗಳಿಗೆ ಹಕ್ಕು ನೀಡಲಿದೆ ಎಂದರು. “ಇದು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಒಬಿಸಿಗಳ ಹಕ್ಕು” ಎಂದು ಶಾ ಹೇಳಿದರು.

ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸರ್ಕಾರವನ್ನು ಕಟುವಾಗಿ ಟೀಕಿಸಿದ ಕೇಂದ್ರ ಗೃಹ ಸಚಿವರು, ಹಲವಾರು ಯೋಜನೆಗಳಲ್ಲಿ ಭ್ರಷ್ಟಾಚಾರವನ್ನು ಆರೋಪಿಸಿದರು. ಭ್ರಷ್ಟ ಆಡಳಿತವನ್ನು ಗದ್ದುಗೆಯಿಂದ ಕಿತ್ತೊಗೆಯುವವರೆಗೆ ಬಿಜೆಪಿಯ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.

ತೆಲಂಗಾಣಕ್ಕೆ ಕೇಂದ್ರದ ಕಲ್ಯಾಣ ಕ್ರಮಗಳು ಬಡವರಿಗೆ ತಲುಪುತ್ತಿಲ್ಲ ಎಂದು ಆರೋಪಿಸಿದರು.

Latest Indian news

Popular Stories