ವಾಷಿಂಗ್ ಟನ್: ದ್ವಿಪಕ್ಷೀಯ ಮಾತುಕತೆಯ ನಂತರ ಪ್ರಧಾನಿ ನರೇಂದ್ರ ಮೋದಿ- ಜೋ ಬೈಡನ್ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು, ಪ್ರಧಾನಿ ಮೋದಿ ಈ ವೇಳೆ ಅಮೇರಿಕಾ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಪತ್ರಕರ್ತರೊಬ್ಬರು ಭಾರತದಲ್ಲಿನ ತಾರಮ್ಯಗಳ ಕುರಿತು ಪ್ರಶ್ನೆ ಮಾಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ನಾವು ಪ್ರಜಾಪ್ರಭುತ್ವವನ್ನು ಉಸಿರಾಡಿ, ಜೀವಿಸುತ್ತೇವೆ. ನಮ್ಮ ಪೂರ್ವಜರು ಅದನ್ನು ನಮ್ಮ ಸಂವಿಧಾನದಲ್ಲಿ ಪದಗಳಲ್ಲಿ ಪ್ರತಿಪಾದಿಸಿದ್ದಾರೆ. ಪ್ರಜಾಪ್ರಭುತ್ವದಿಂದ ನಾವು ಸಾಧಿಸಬಹುದು ಎಂಬುದನ್ನು ಸಂವಿಧಾನ ತೋರಿಸಿಕೊಟ್ಟಿದೆ. ಜಾತಿ, ಧರ್ಮ ಅಥವಾ ಲಿಂಗದ ಆಧಾರದಲ್ಲಿ ತಾರತಮ್ಯಗಳಿಗೆ ಅವಕಾಶವಿಲ್ಲ. ಮಾನವ ಹಕ್ಕುಗಳಿಲ್ಲದೇ ಅಥವಾ ಘನತೆಗೆ ಜಾಗವಿಲ್ಲದೇ ಪ್ರಜಾಪ್ರಭುತ್ವವಿಲ್ಲ, ಪ್ರಜಾಪ್ರಭುತ್ವವನ್ನು ಜೀವಿಸಿ, ಉಸಿರಾಡುವವರಲ್ಲಿ ತಾರತಮ್ಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮೋದಿ ಹೇಳಿದ್ದಾರೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಪ್ರಧಾನಿ ಮೋದಿ ಭವ್ಯ ಸ್ವಾಗತಕ್ಕಾಗಿ ಅಮೇರಿಕಾ ಅಧ್ಯಕ್ಷ ಬೈಡನ್ ಗೆ ಧನ್ಯವಾದ ತಿಳಿಸಿದ್ದು, ಮತ್ತಷ್ಟು ಗಟ್ಟಿಯಾದ ಭಾರತ- ಅಮೇರಿಕಾದ ಸಂಬಂಧಗಳು ಹೊಸ ಉದ್ಯಮ ಸೃಷ್ಟಿಗೆ ಸಂಬಂಧ ನಾಂದಿ ಹಾಡಲಿದೆ ಎಂದು ಹೇಳಿದ್ದಾರೆ.
ಅಮೇರಿಕಾ ಭಾರತದ ನಡುವೆ ಸಂಬಂಧ, ವ್ಯಾಪಾರ ವಹಿವಾಟು ಉತ್ತಮವಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಒಪ್ಪಂದ ಮಾಡಿಕೊಂಡಿದ್ದೇವೆ. ಶ್ವೇತ ಭವನಕ್ಕೆ ಆಗಮಿಸುವಾಗ ಎನ್ ಆರ್ ಐಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು, ಇದು ಭಾರತ- ಅಮೇರಿಕಾ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಉಗ್ರವಾದದ ವಿರುದ್ಧ ಭಾರತ- ಅಮೇರಿಕಾ ಪರಸ್ಪರ ಹೆಗಲಿಗೆ ಹೆಗಲು ನೀಡಿ ಹೋರಾಡುತ್ತದೆ. ಪ್ರಜಾತಂತ್ರದ ಮೂಲ ಉದ್ದೇಶ ಗಟ್ಟಿಗೊಳಿಸುವುದೇ ಈ ಭೇಟಿಯ ಉದ್ದೇಶವಾಗಿದೆ ಎಂದು ಮೋದಿ ಹೇಳಿದ್ದಾರೆ.
ಇನ್ನು ಮೋದಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಮೇರಿಕಾ ಅಧ್ಯಕ್ಷ ಜೋ ಬೈಡನ್, ಮೋದಿ ಅವರ ಅಮೇರಿಕ ಭೇಟಿ ಫಲಪ್ರದವಾಗಿದೆ. ರಾಜತಾಂತ್ರಿಕತೆ ಮೂಲಕ ಉಕ್ರೇನ್ ಯುದ್ಧ ನಿಲ್ಲಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಸೆಮಿಕಂಡಕ್ಟರ್ ಉತ್ಪಾದಾ ಕ್ಷೇತ್ರ ಹೆಚ್ಚಿನ ಆದ್ಯತೆ ನೀಡಲು ಮಾತುಕತೆಯಲ್ಲಿ ನಿರ್ಧರಿಸಲಾಗಿದೆ ಎಂದು ಬೈಡನ್ ಹೇಳಿದ್ದಾರೆ. ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದಿ ಅಮೇರಿಕಾದ ಕಾಂಗ್ರೆಸ್ ನ್ನುದ್ದೇಶಿಸಿ ಮಾತನಾಡಲಿದ್ದಾರೆ.