ಇಡಿಯಿಂದ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಬಂಧನ

ಮುಂಬೈ: ಕೆನರಾ ಬ್ಯಾಂಕ್‌ನಲ್ಲಿ 538 ಕೋಟಿ ರೂ. ಸಾಲ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಶುಕ್ರವಾರ ತಡರಾತ್ರಿ ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮುಂಬೈನ ಕೇಂದ್ರ ಏಜೆನ್ಸಿಯ ಕಚೇರಿಯಲ್ಲಿ ಸುದೀರ್ಘ ವಿಚಾರಣೆಯ ನಂತರ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ನರೇಶ್ ಗೋಯಲ್ ಅವರನ್ನು ಇಡಿ ಬಂಧಿಸಿದೆ.

74 ವರ್ಷದ ಗೋಯಲ್ ಅವರನ್ನು ಶನಿವಾರ ಮುಂಬೈನ ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಇಡಿ ತನ್ನ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಕೆನರಾ ಬ್ಯಾಂಕ್‌ ಗೆ 538 ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಟ್ ಏರ್‌ವೇಸ್, ಗೋಯಲ್, ಅವರ ಪತ್ನಿ ಅನಿತಾ ಮತ್ತು ಕಂಪನಿಯ ಕೆಲವು ಮಾಜಿ ಅಧಿಕಾರಿಗಳ ವಿರುದ್ಧ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಸಿಬಿಐ) ಎಫ್‌ಐಆರ್‌ ದಾಖಲಿಸಿತ್ತು. ನಂತರ ಇಡಿ ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿತು.

ಜೆಟ್ ಏರ್‌ವೇಸ್ (ಇಂಡಿಯಾ) ಲಿಮಿಟೆಡ್‌ಗೆ (ಜೆಐಎಲ್) 848.86 ಕೋಟಿ ರೂಪಾಯಿಗಳ ಸಾಲದ ಮಿತಿಗಳು ಮತ್ತು ಸಾಲಗಳನ್ನು ಇದರಲ್ಲಿ 538.62 ಕೋಟಿ ರೂ. ಮಂಜೂರು ಮಾಡಿದೆ ಎಂದು ಆರೋಪಿಸಿ ಬ್ಯಾಂಕ್‌ನ ದೂರಿನ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ, ಜುಲೈ 29, 2021 ರಂದು ಖಾತೆಯನ್ನು “ವಂಚನೆ” ಎಂದು ಘೋಷಿಸಲಾಗಿದೆ ಎಂದು ಸಿಬಿಐ ಹೇಳಿದೆ.

Latest Indian news

Popular Stories