ಉಡುಪಿ: ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ ವಿಧಾನ ಪರಿಷತ್ ಚುನಾವಣೆ ಮೇಲೆ ಯಾವುದೇ ರೀತಿಯಲ್ಲೂ ಪರಿಣಾಮ ಬೀರಲ್ಲ. ಇದು ವೈಯಕ್ತಿಕವಾಗಿ ಮಾಡಿರುವ ತಪ್ಪು. ಒಬ್ಬ ಮಾಡಿದ ತಪ್ಪಿಗೆ ಇಡೀ ಪಕ್ಷ ಜವಾಬ್ದಾರಿ ಆಗುವುದಿಲ್ಲ ಎಂದು ನೈಋತ್ಯ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಭೋಜೇಗೌಡ ಹೇಳಿದರು.
ಉಡುಪಿ ಬಿಜೆಪಿ ಕಚೇರಿಯಲ್ಲಿ ಎಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳ ಈ ವಿಚಾರವನ್ನು ಗೌಪ್ಯವಾಗಿ ಇಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಗೌಪ್ಯವಾಗಿಟ್ಟು ಕೊಂಡು ಸಂಬಂಧಪಟ್ಟ ತನಿಖಾ ತಂಡಗಳು ವಿಚಟಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಕಾರ್ಯ ಮಾಡಬೇಕು. ಆ ಕೆಲಸ ಸರಕಾರದಿಂದ ಆಗಬೇಕು. ನಿಷ್ಪಕ್ಷಪಾತ ತನಿಖೆಗೆ ನಾವು ಯಾರು ಅಡ್ಡಿ ಪಡಿಸಿಲ್ಲ. ಒಳ್ಳೆಯ ಅಧಿಕಾರಿಗಳಿಗೆ ನಿಷ್ಪಕ್ಷಪಾತ ತನಿಖೆ ಆಗಲಿ ಎಂದು ಅವರು ತಿಳಿಸಿದರು