ಪ್ರಜ್ವಲ್ ರೇವಣ್ಣ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಆಪ್’ಲೋಡ್ ಮಾಡಿದ ಆರೋಪಿ ಬಂಧನ

ಚಿಕ್ಕಮಗಳೂರು, ಮೇ 10: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿಬಿಟ್ಟ ಆರೋಪಿಯನ್ನು ಕುದುರೆಮುಖ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೂಡಿಗೆರೆ ತಾಲೂಕಿನ ಸಂಸೆ ಗ್ರಾಮದ ಪ್ರಜ್ವಲ್ ಬಂಧಿತ ಆರೋಪಿ. ಆರೋಪಿ ಪ್ರಜ್ವಲ್, ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅವರ ಅಶ್ಲೀಲ ವಿಡಿಯೋಗಳು ಎಂದು ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್​ನಲ್ಲಿ ಅಪ್ಲೋಡ್​ ಮಾಡಿದ್ದನು. ಪ್ರಜ್ವಲ್ ವಿರುದ್ಧ ಕುದುರೆಮುಖ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 67,67 (ಎ) ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪ್ರಜ್ವಲ್​ ಟ್ರೋಲ್ ಪೇಜ್ ಅಡ್ಮಿನ್ ಆಗಿದ್ದಾನೆ.

ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಸಾವಿರಾರು ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರ ಪ್ರಕರಣವನ್ನು ಎಸ್​ಐಟಿಗೆ ನೀಡಿದೆ. ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಪ್ರಜ್ವಲ್​ ರೇವಣ್ಣ ಅವರಿಗೆ ಸಂಬಂಧಿಸಿದ ವಿಡಿಯೋಗಳು ಅಂತ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ​ ವಿಡಿಯೋಗಳು ಹರಿದಾಡುತ್ತಿವೆ. ವಿಡಿಯೋದಲ್ಲಿ ಹಾಸನ ಸೇರಿದಂತೆ ಹಲವು ಕಡೆಯ ಮಹಿಳೆಯರು ಇದ್ದಾರೆನ್ನಲಾಗಿದ್ದು, ಅವರ ಮುಖವನ್ನು ಬ್ಲರ್‌ ಮಾಡಲಾಗಿಲ್ಲ. ಹೀಗಾಗಿ ಈ ಕೇಸ್‌ ಮತ್ತಷ್ಟು ಜಟಿಲವಾಗಿದೆ.

ಈ ಸಂಬಂಧ ಎಸ್ಐಟಿಯ ಮುಖ್ಯಸ್ಥ ಬಿ.ಕೆ. ಸಿಂಗ್ ಪ್ರಕಟಣೆ ನೀಡಿದ್ದು, ಅಶ್ಲೀಲ ವಿಡಿಯೋಗಳನ್ನು ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ‌ ಇಟ್ಟುಕೊಳ್ಳುವುದು ಸಹ ಅಪರಾಧ. ಯಾವುದೇ ವ್ಯಕ್ತಿ ಸಂದೇಶಗಳನ್ನು ರೂಪಿಸುವ, ಇಟ್ಟುಕೊಳ್ಳುವ ಹಾಗೂ ಪ್ರಸಾರ ಮಾಡುವ ಕೆಲಸವನ್ನು ಮಾಡಿದರೇ, ಅಂಥ ವ್ಯಕ್ತಿಗಳ‌ನ್ನು ಸಂದೇಶ ರಚನೆಕಾರರು ಎಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಅಶ್ಲೀಲ ವಿಡಿಯೋ ಹಾಗೂ ಧ್ವನಿ ಮುದ್ರಣವನ್ನು ಇಟ್ಟುಕೊಂಡಿದ್ದರೆ ಅದು ಅಪರಾಧವಾಗುವುದರಿಂದ ಜನರು ತಮ್ಮ ಮೊಬೈಲ್‌ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡಿದ್ದರೆ ಕೂಡಲೇ ಡಿಲೀಟ್‌ ಮಾಡಿಬಿಡಿ. ಹೀಗೆ ಡಿಲೀಟ್ ಮಾಡುವುದರಿಂದ ಕಾನೂನು ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರುತ್ತದೆ ಎಂದು ಬಿ.ಕೆ. ಸಿಂಗ್ ಪ್ರಕಟಣೆಯಲ್ಲಿ ಸೂಚನೆ ನೀಡಿದ್ದರು. ಇದಾದ ಬಳಿಕ ಎಸ್​ಐಟಿ ಅಧಿಕಾರಿಗಳು ಈ ವಿಡಿಯೋಗಳನ್ನು ಹರಿಬಿಟ್ಟ ವ್ಯಕ್ತಿಗಾಗಿ ಬಲೆ ಬೀಸಿದ್ದರು.  ಇದೀಗ ಆರೋಪಿ ಸಿಕ್ಕಿಬಿದ್ದಿದ್ದಾನೆ.

Latest Indian news

Popular Stories