ಶಿವಮೊಗ್ಗ: ಭದ್ರಾವತಿಯ ಸರ್ ಎಂ. ವಿ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳನ್ನು ಹೊರಗಿಟ್ಟು ಪ್ರಕಾಶ್ ರೈ ಜೊತೆ ಸಂವಾದ ಕಾರ್ಯಕ್ರಮ ನಡೆಸಲಾಯಿತು. ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ರಂಗಭೂಮಿ, ಸಿನಿಮಾ ಮತ್ತು ಸಮಾಜ’ ವಿಷಯದ ಸಂಬಂಧ ಸಂವಾದ ನಡೆಯಿತು. ಆದರೆ, ಕೆಲ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮದಿಂದ ಹೊರಗೆ ಇಡಲಾಗಿತ್ತು.
ಇದರಿಂದ ಕೆರಳಿದ ವಿದ್ಯಾರ್ಥಿಗಳು, ಧಿಕ್ಕಾರ ಕೂಗಿ ಒಳನುಗ್ಗಲು ಪ್ರಯತ್ನಿಸಿದರು. ದೇಶ ವಿರೋಧಿ ಶಕ್ತಿಗಳಿಗೆ ಸದಾ ಬೆಂಬಲಿಸುವ ಪ್ರಕಾಶ್ ರೈಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವ ಯೋಗ್ಯತೆ ಇಲ್ಲ ಎಂದು ಆಕ್ರೋಶ ಹೊರಹಾಕಿದರು. ಅಲ್ಲದೆ, ಕಾರ್ಯಕ್ರಮದ ನಂತರ ಪ್ರಕಾಶ್ ರಾಜ್ ಓಡಾಡಿದ ಜಾಗಕ್ಕೆಲ್ಲಾ ಗೋ ಮೂತ್ರ ಸಿಂಪಡಿಸಿ ಶುದ್ಧೀಕರಣದ ಪ್ರಹಸನ ಮಾಡಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಪ್ರಕಾಶ್ ರಾಜ್, ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳೆಲ್ಲಾ ವಿಫಲವಾಗಿವೆ. ಆದರೆ ಈ ಬಗ್ಗೆ ಮಾತನಾಡುವವರು ಯಾರು ? ಅವರದ್ದು 5 ವರ್ಷ ಮುಗಿಯುತ್ತೆ. ಅವರೇನು ದೇವರಲ್ಲ ಎಂದ ಅವರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನಪರವಾಗಿದ್ದು ಇದರಿಂದ ಜನರಿಗೆ ಒಳ್ಳೆಯದಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಮನುಷ್ಯನಲ್ಲಿ ಪ್ರೀತಿ ಇದೆ, ಅದನ್ನು ಹಂಚಿ ಬದುಕಬೇಕು. ದೇಶದಲ್ಲಿ ಇವತ್ತು ಹಿಂಸೆಯೂ ನಡೆಯುತ್ತಿದೆ. ಇದು ಜನರಿಗೆ ಅರ್ಥವಾಗುತ್ತಿದೆ. ಮಾನವೀಯತೆ ತುಳಿಯುವವರ ವಿರುದ್ಧ ನಾವು ಪ್ರೀತಿಯಿಂದ ಎದ್ದು ನಿಲ್ಲುತ್ತಿದ್ದೇವೆ. ನಮಗೆ ದ್ವೇಷ ಬೇಕಿಲ್ಲ, ನಮಗೆ ಬೇಕಿರುವುದು ಪ್ರೀತಿ. ಎಲ್ಲರಲ್ಲೂ ಸಮಾನತೆ ಇರಬೇಕು. ನಮ್ಮ ಕ್ರೌರ್ಯ, ವಿರೋಧ ದೇಶ ಹಾಳಾಗಲು ಕಾರಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ರಂಗಭೂಮಿ ಕಲೆ ಬೆಳೆಸಲು ಹೊರಟಿದ್ದೇವೆ. ಮಕ್ಕಳಿಗಾಗಿ ವಿಶೇಷವಾಗಿ ರಂಗಕಲೆ ಕಲಿಸಲು ಮುಂದಾಗಿದ್ದೆವೆ. ಪ್ರಪಂಚದ ಬೇರೆ ಬೇರೆ ಕವಿಗಳ, ಬರಹಗಾರರ ಬರವಣಿಗೆಗಳನ್ನು ಇಟ್ಟುಕೊಂಡು ನಾಟಕ ಮಾಡಿಸುವುದಾಗಿ ತಿಳಿಸಿದರು.