3ನೇ ಟಿ20: ಕೊನೆಗೂ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆದ್ದು ಬೀಗಿದ ಟೀಂ ಇಂಡಿಯಾ

ಗಯಾನಾ: ಮೊದಲೆರಡು ಪಂದ್ಯಗಳನ್ನು ಸೋತಿದ್ದ ಭಾರತ ತಂಡ ಕೊನೆಗೂ ಮಾಡು ಇಲ್ಲವೇ ಮಡಿ ಎಂಬಂತಿದ್ದ ಮೂರನೇ ಟಿ20 ಪಂದ್ಯದಲ್ಲಿ 7 ವಿಕೆಟ್ ಗಳ ಜಯ ದಾಖಲಿಸಿದೆ.

ಗಯಾನದ ಪ್ರಾವಿಡೆನ್ಸ್‌ ಮೈದಾನದಲ್ಲಿ ನಡೆದ ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ 160 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಟೀಂ ಇಂಡಿಯಾ ಸೂರ್ಯ ಕುಮಾರ್ ಯಾದವ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ ಗಳ ಅಂತರದಲ್ಲಿ ವಿಂಡೀಸ್ ತಂಡವನ್ನು ಮಣಿಸಿದೆ. ಆ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-2 ಅಂತರದಲ್ಲಿದ್ದು ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ.

ಇಂದು ನಡೆದ ಪಂದ್ಯದಲ್ಲಿ ಆರಂಭಿಕ ಆಘಾತದ ಹೊರತಾಗಿಯೂ ಟೀಂ ಇಂಡಿಯಾದ ಮಿ.360 ಖ್ಯಾತಿಯ ಆಟಗಾರ ಸೂರ್ಯ ಕುಮಾರ್ ಯಾದವ್ ಕೇವಲ 44 ಎಸೆತಗಳಲ್ಲಿ 10 ಬೌಂಡರಿ, 4 ಸಿಕ್ಸರ್ ಗಳ ನೆರವಿನಿಂದ 83 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ತಿಲಕ್ ವರ್ಮಾ ಕೂಡ 37 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅಜೇಯ 49 ರನ್ ಸಿಡಿಸಿದರು. ಅಂತಿಮವಾಗಿ ನಾಯಕ ಹಾರ್ದಿಕ್ ಪಾಂಡ್ಯಾ 15 ಎಸೆತಗಳಲ್ಲಿ 20 ರನ್ ಸಿಡಿಸಿ ಗೆಲುವಿನ ಔಪಚಾರಿಕತೆ ಪೂರ್ಣಗೊಳಿಸಿದರು.

ಇನ್ನು ಇಂದು ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ಕಾಲಿಟ್ಟ ಐಪಿಎಲ್ ಸ್ಟಾರ್ ಯಶಸ್ವಿ ಜೈಸ್ವಾಲ್ ಪದಾರ್ಪಣೆ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದರು. ಕೇವಲ 2 ಎಸೆತಗಳನ್ನು ಎದುರುಸಿದ ಜೈಸ್ವಾಲ್ 1 ರನ್ ಗಳಿಸಿ ಒಬೆಡ್ ಮೆಕೋಯ್ ಗೆ ವಿಕೆಟ್ ಒಪ್ಪಿಸಿದರು. ಶುಭ್ ಮನ್ ಗಿಲ್ ಕೂಡ 11 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿ ಜೋಸೆಫ್ ಗೆ ವಿಕೆಟ್ ಒಪ್ಪಿಸಿದರು. 

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಭಾರತದ ಕುಲದೀಪ್ ಯಾದವ್ ಮಾರಕವಾಗಿ ಪರಿಣಮಿಸಿದ್ದರು. ಆರಂಭಿಕ ಯಶಸ್ಸಿನ ಹೊರತಾಗಿಯೂ ವಿಂಡೀಸ್ ಪಡೆ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು. ವಿಂಡೀಸ್ ನ ಆರಂಭಿಕರಾದ ಬ್ರಾಂಡನ್ ಕಿಂಗ್ 42 ರನ್ ಗಳಿಸಿದರೆ, ಮೇಯರ್ಸ್ 25ರನ್ ಗಳಿಸಿದ್ದರು. ನಾಯಕ ಪೋವೆಲ್ ಕೂಡ 40ರನ್ ಗಳಿಸಿದರಾದರೂ ಮಧ್ಯಮ ಕ್ರಮಾಂಕದ ಕುಸಿತ ತಂಡದ ಬೃಹತ್ ಮೊತ್ತಕ್ಕೆ ಅಡ್ಡಿಯಾಯಿತು. ಭಾರತದ ಪರ ಕುಲದೀಪ್ ಯಾದವ್ 3 ವಿಕೆಟ್ ಪಡೆದರೆ, ಅಕ್ಸರ್ ಪಟೇಲ್ ಮತ್ತು ಮುಖೇಶ್ ಕುಮಾರ್ ತಲಾ 1 ವಿಕೆಟ್ ಪಡೆದರು.

Latest Indian news

Popular Stories