ಗೌರಿ ಲಂಕೇಶ್‌ ಹತ್ಯೆ ಆರೋಪಿ ಭೇಟಿಯಾದ ಪ್ರತಾಪ್ ಸಿಂಹ: ಗೋಡ್ಸೆ ಆರಾಧಕ ಬಿಜೆಪಿಯವರ ಅಸಲಿ ಮುಖವೆ ಇದು‌; ದಿನೇಶ್ ಗುಂಡೂರಾವ್

ಬೆಂಗಳೂರು: ಗೌರಿ ಲಂಕೇಶ್‌ ಹತ್ಯೆಯ ಆರೋಪಿಗಳಲ್ಲಿ ಒಬ್ಬನಾದ ಮಂಡ್ಯದ ನವೀನ್‌ ಕುಮಾರ್‌ ಇತ್ತೀಚೆಗೆ ಜಾಮೀನಿನಲ್ಲಿ ಹೊರಬಂದಿದ್ದಾನೆ. ಆತನ ಮನೆಗೆ ಹೋಗಿ ಆತನ ಆರೋಗ್ಯ ವಿಚಾರಿಸಿದ ಮೈಸೂರಿನ ಮಾಜಿ ಸಂಸದ ಪ್ರತಾಪ್‌ ಸಿಂಹ ನಡೆ ಭಾರೀ ಟೀಕೆಗೆ ಒಳಗಾಗಿದೆ.

ನವೀನ್‌ ಕುಮಾರ್‌ನನ್ನು ಭೇಟಿಯಾಗಿ ಆತನಿಗೆ ಹಣ್ಣಿನ ಬುಟ್ಟಿ ಕೊಟ್ಟು ತೆಗೆಸಿಕೊಂಡ ಫೋಟೋಗಳನ್ನು ಸ್ವತಃ ಪ್ರತಾಪ್‌ ಸಿಂಹ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಕೊಲೆ ಪ್ರಕರಣದ ಆರೋಪಿ‌ಯು ಬಿಜೆಪಿ ಮುಖಂಡ ಪ್ರತಾಪ್ ಸಿಂಹ‌ ಸ್ನೇಹಿತ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಮಾಜಿ ಸಂಸದ ಪ್ರತಾಪ್ ಸಿಂಹ ನಡೆಯನ್ನು ಕಾಂಗ್ರೆಸ್‌ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

ಪ್ರತಾಪ್ ಸಿಂಹ ನಡೆಯ ವಿರುದ್ಧ ಕಿಡಿಕಾರಿರುವ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಪ್ರತಾಪ್ ಸಿಂಹ ಹಾಗೂ ನವೀನ್ ಕುಮಾರ್ ಫೋಟೋ ಹಂಚಿಕೊಂಡು, ಗೋಡ್ಸೆ ಆರಾಧಕ ಬಿಜೆಪಿಯವರ ಅಸಲಿ ಮುಖವೇ ಇದು‌ ಎಂದು ಆಕ್ರೋಶ ಹೊರಹಾಕಿದ್ದಾರೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಮದ್ದೂರಿನ ನವೀನ್ ಕುಮಾರ್ ತನ್ನ ಗೆಳೆಯ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೊಂಡಿದ್ದಾರೆ. ಗೋಡ್ಸೆ ಆರಾಧಕ ಬಿಜೆಪಿಯವರ ಅಸಲಿ ಮುಖವೇ ಇದು‌.

ಸಮಾಜದ ಶಾಂತಿ ಕದಡುವ, ಕೊಲೆ, ಸುಲಿಗೆಯಂತಹ ವಿದ್ವಂಸಕ ಕೃತ್ಯ ನಡೆಸುವವರೆಲ್ಲಾ ಬಿಜೆಪಿಯ ಗರ್ಭಗುಡಿಯಲ್ಲೇ ಇರುತ್ತಾರೆ‌ ಎಂಬುವುದಕ್ಕೆ ಇದೊಂದು ನಿದರ್ಶನ. ದಿಟ್ಟ ಪತ್ರಕರ್ತೆಯಾಗಿದ್ದ ಗೌರಿ ಲಂಕೇಶ್‌ರವರನ್ನು ನಿಷ್ಕಾರಣವಾಗಿ ಕೊಲೆಗೈದ ಆರೋಪಿಯ ಕೃತ್ಯವನ್ನು ಬಿಜೆಪಿಯ ಮಾಜಿ ಸಂಸದರು ಖಂಡಿಸುವ ಬದಲು, ಆ ಆರೋಪಿಯ ಹೆಗಲ ಮೇಲೆ ಕೈ ಹಾಕಿ ಫೋಟೋ ತೆಗೆಸಿಕೊಂಡರೆ ಸಮಾಜಕ್ಕೆ ಯಾವ ಸಂದೇಶ ಹೋಗುತ್ತದೆ..?’ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಪ್ರಶ್ನಿಸಿದ್ದಾರೆ.

‘ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಮೊದಲಿಗೆ ಆರೋಪಿ ನಂ-1 ಆಗಿ, ನಂತರ ಆರೋಪಿ-17 ಆಗಿ, ಆರೂವರೆ ವರ್ಷ ಜೈಲಿನಲ್ಲಿದ್ದು, ಇತ್ತೀಚೆಗೆ ಜಾಮೀನಿನ ಹೊರಬಂದಿರುವ ಸ್ನೇಹಿತ ಮದ್ದೂರು ನವೀನ್ ರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದೆ. ಮದ್ದೂರಿನ ಯುವ ಸ್ನೇಹಿತರೂ ಜೊತೆಗಿದ್ದರು’ ಎಂದು ಬರೆದುಕೊಂಡಿದ್ದಾರೆ.

Latest Indian news

Popular Stories