ಮೋದಿ ಸತ್ಯದ ಹಾದಿಯಲ್ಲಿ ನಡೆಯುತ್ತಿಲ್ಲ, ನೂರಾರು ಕೋಟಿ ರೂ. ನೀಡಿ ಶಾಸಕರನ್ನು ಖರೀದಿಸುತ್ತಾರೆ: ಪ್ರಿಯಾಂಕಾ ಗಾಂಧಿ ವಾಗ್ದಾಳಿ

ಚಿತ್ರದುರ್ಗ: ದೇಶದ ಅತಿ ದೊಡ್ಡ ನಾಯಕ ನೈತಿಕತೆಯನ್ನು ತೊರೆದು ಜನರ ಮುಂದೆ ನಾಟಕವಾಡುತ್ತಿದ್ದಾರೆ ಮತ್ತು ಅವರು ಸತ್ಯದ ಹಾದಿಯಲ್ಲಿ ನಡೆಯುತ್ತಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇಂದು ಚಿತ್ರದುರ್ಗದ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಪ್ರಧಾನಿ ಮೋದಿ ಸತ್ಯದ ಹಾದಿಯಲ್ಲಿ ನಡೆಯುತ್ತಿಲ್ಲ. ಸತ್ಯದ ಹಾದಿಯಲ್ಲಿ ನಡೆಯೋದು ಹಿಂದೂ ಧರ್ಮದ ಪರಂಪರೆ. ಶ್ರೀರಾಮ, ಗಾಂಧೀಜಿ, ಇತರೆ ಪ್ರಧಾನಿಗಳು ಸೇವಾಭಾವದಿಂದ ನಡೆದರು. ಆದರೆ ಮೋದಿ ಸರ್ಕಾರದಲ್ಲಿ ಕೇವಲ ಸುಳ್ಳಿನ ಕಂತೆಯೇ ಇದೆ ಎಂದು ಕಿಡಿಕಾರಿದರು.

ಪ್ರಧಾನಿ ತಪ್ಪು ದಾರಿಯಲ್ಲಿ ನಡೆದು, ವಿವಿಧ ರಾಜ್ಯಗಳಲ್ಲಿ ಸರ್ಕಾರಗಳನ್ನು ಬೀಳಿಸುತ್ತಾರೆ. ನೂರಾರು ಕೋಟಿ ರೂ. ಹಣ ನೀಡಿ ಶಾಸಕರನ್ನು ಖರೀದಿ ಮಾಡುತ್ತಾರೆ. ಚುನಾವಣೆ ವೇಳೆ ಅಭಿವೃದ್ಧಿ ವಿಚಾರ ಬಿಟ್ಟು ಜನರ ಭಾವನೆ ಕೆರಳಿಸುತ್ತಾರೆ ಎಂದು ಕಾಂಗ್ರೆಸ್ ನಾಯಕಿ ಹೇಳಿದರು.

ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲು ಅವರ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿಸುತ್ತಾರೆ ಮತ್ತು ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿಗಟ್ಟುವ ಮೂಲಕ ದುರ್ಬಲಗೊಳಿಸುವ ಯತ್ನ ನಡೆಸಿದರು ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದರು.

ಈಗ ರದ್ದುಗೊಂಡಿರುವ ಚುನಾವಣಾ ಬಾಂಡ್‌ಗಳ ಯೋಜನೆ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕಿ, ದಾಳಿಗೊಳಗಾದ ಕಂಪನಿಗಳು ಬಿಜೆಪಿಗೆ ನೂರಾರು ಕೋಟಿ ರೂ. ದೇಣಿಗೆ ನೀಡಿವೆ ಮತ್ತು ನಂತರ ಅವರ ವಿರುದ್ಧದ ಪ್ರಕರಣಗಳನ್ನು ಕೈಬಿಡಲಾಗಿದೆ. ನೋಟು ಅಮಾನ್ಯೀಕರಣದ ಮೂಲಕ ಕಪ್ಪುಹಣವನ್ನು ಬಿಳಿಯಾಗಿಸಿ ಬಿಜೆಪಿ ಖಾತೆಗೆ ಜಮಾ ಮಾಡಿದ್ದು ಹೇಗೆ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಟೀಕಿಸಿದರು.

Latest Indian news

Popular Stories