ಶೈಕ್ಷಣಿಕ ಪ್ರಗತಿಗೆ ಪಾಲಕರ, ಸಮುದಾಯದ ಹೊಣೆಗಾರಿಕೆ ಮಹತ್ವದ್ದು: ಜಿಪಂ ಸಿಇಒ ರಾಹುಲ್ ಶಿಂಧೆ

ವಿಜಯಪುರ: ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಾಲಕರೂ ಸೇರಿದಂತೆ ಸಮುದಾಯದ ಹೊಣೆಗಾರಿಕೆ ಬಹು ಮಹತ್ವದ್ದಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಹೇಳಿದರು.

ಜಿಲ್ಲೆಯ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ನಡೆದ ಪಾಲಕರ ಹಾಗೂ ಶಿಕ್ಷಕರ ಸಭೆಗಳಲ್ಲಿ ಪಾಲ್ಗೊಂಡು ಮಾತನಾಡಿದರು.
ಪಾಲಕರ ಸಭೆಯಲ್ಲಿ ಜಿಲ್ಲೆಯ 7 ತಾಲೂಕಿನ 178 ಸಿ.ಆರ್.ಸಿಗಳ 1988 ಶಾಲೆಗಳಲ್ಲಿ 122090 ಬಾಲಕರು ಹಾಗೂ 129833 ಬಾಲಕಿಯರು ಸೇರಿದಂತೆ 252004 ದಾಖಲಾತಿ ಇದ್ದು, ಜಿಲ್ಲೆಯ 7 ತಾಲೂಕಿನ 178 ಸಿ.ಆರ್.ಸಿ.ಗಳಲ್ಲಿ 1988 ಶಾಲೆಗಳ ಪೈಕಿ 66690 ಪಾಲಕರು ಪಾಲ್ಗೊಂಡಿದ್ದರು.

ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಶಾಲೆಯ ಬಗೆಗೆ ಅನೇಕ ವಿಷಯಗಳನ್ನು ಮನವರಿಕೆ ಮಾಡಿಕೊಟ್ಟು ಸಮುದಾಯ ಭಾಗವಹಿಸುವಿಕೆಯ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. ಶಿಕ್ಷಣ ಹಾಗೂ ತಮ್ಮ ಮಕ್ಕಳ ಕಲಿಕಾ ಪರಿ ಅರಿತುಕೊಳ್ಳಲು ಪಾಲಕರಿಗೆ ಇದು ವೇದಿಕೆಯಾಯಿತು.ಮಕ್ಕಳ ಕಲಿಕೆ ಇನ್ನೂ ಫಲಪ್ರದವಾಗಲು ಪರಿಣಾಮಕಾರಿ ಕಲಿಕೆಗೆ ಒತ್ತು ನೀಡಲು ಶಾಲಾವಧಿಯ ನಂತರ ಪರಿಹಾರ ಬೋಧನಾ ಪದ್ಧತಿ ಅಳವಡಿಸಿಕೊಳ್ಳುವುದು ಅವಶ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು. ಪಾಲಕರು ಮನೆಯಲ್ಲಿ ಮಕ್ಕಳಿಗೆ ಕಲಿಕಾ ವಾತಾವರಣ ಕಲ್ಪಿಸಬೇಕು. ಶಾಲಾ ಭೌತಿಕ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಮಗುವಿನ ಸರ್ವಾಂಗೀಣ ಪ್ರಗತಿಗೆ ಶಿಕ್ಷಕರು, ಪಾಲಕರು ಒಗ್ಗೂಡಿ ಶ್ರಮಿಸಿದರೆ ಮಾತ್ರ ಪ್ರಗತಿ ಸಾಧ್ಯ, ನರೇಗಾ ಕಾಮಗಾರಿಯಡಿ ಶಾಲಾ ಕಂಪೌಂಡ್ ನಿರ್ಮಾಣ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು. ಪರಿಣಾಮಕಾರಿ ಕಲಿಕೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಶಿಕ್ಷಕರು ಕೌಶಲ್ಯಯುಕ್ತ ಬೋಧನಾ ವಿಧಾನ ಬಳಸಿ ಪಾಠ ಮಾಡಬೇಕು. ಮನೆಯಲ್ಲಿಯೂ ಮಗುವಿಗೆ ಕಲಿಕಾ ವಾತಾವರಣ ಒದಗಿಸಿ, ಅವರ ಕಲಿಕಾ ಪ್ರಗತಿಗೆ ಆದ್ಯತೆ ನೀಡಿ ಎಂದು ರಾಹುಲ್ ಶಿಂಧೆ ಅವರು ತಿಳಿಸಿದರು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎನ್.ಎಚ್.ನಾಗೂರ ಅವರು ಕೋಲ್ಹಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಪಾಲಕರೊಂದಿಗೆ ಮತ್ತು ಮಕ್ಕಳೊಂದಿಗೆ ಸಂವಾದ ನಡೆಸಿ, ಪ್ರತಿ ಮಗುವಿನ ಸರ್ವಾಂಗೀಣ ಶೈಕ್ಷಣಿಕ ಪ್ರಗತಿಯಾಗಬೇಕಾದರೆ, ಶಿಕ್ಷಕ, ಪಾಲಕ ಹಾಗೂ ಸಮುದಾಯ ಶೈಕ್ಷಣಿಕ ಅಭಿವೃದ್ಧಿಗೆ ಕೈಜೋಡಿಸಬೇಕು. ಶಾಲೆಗೆ ಅಗತ್ಯ ಇರುವ ಮೂಲಭೂತ ಸೌಲಭ್ಯ ಕಲ್ಪಸಿಕೊಡಲು ದಾನಿಗಳು ಸಹಕಾರ ನೀಡಬೇಕು.

ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ಸಿ.ಬಿ.ದೇವರಮನಿ ಮತ್ತು ಶ್ರೀಮತಿ ಪಠಾಣ ಅವರು ಕುಪಕಡ್ಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರೌಢ ಶಾಲೆ ಶಾಲೆಗಳಲ್ಲಿ, ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಗಳಾದ ಆರ್.ಎಸ್.ಅಥಣಿ ಅವರು ಟಕ್ಕಳಕಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರೌಢ ಶಾಲೆಗಳಲ್ಲಿ ಪಾಲಕರೊಂದಿಗೆ ಸಂವಾದ ನಡೆಸಿ, ಪಾಲಕರ ಸಭೆಯಲ್ಲಿ ಭಾಗವಹಿಸುವ ಮಹತ್ವದ ಕುರಿತು ತಿಳಿಸಲಾಯಿತು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಪ್ರಕಟಣೆ ತಿಳಿಸಿದೆ.

Latest Indian news

Popular Stories