ರಾಜಗುರು ಇಂಡಸ್ಟ್ರೀಜ್ ನಲ್ಲಿ ದುರಂತ: ಮೃತ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡಲು ಕ್ರಮ: ಸಚಿವ ಎಂ.ಬಿ.ಪಾಟೀಲ

ವಿಜಯಪುರ: ನಗರದ ಹೊರವಲಯದ ಅಲಿಯಾಬಾದ ಕೈಗಾರಿಕೆ ಪ್ರದೇಶದಲ್ಲಿ ರಾಜಗುರು ಇಂಡಸ್ಟ್ರೀಸ್ ನ ಮೆಕ್ಕೆಜೋಳ ಸಂಸ್ಕರಣೆ ಘಟಕದಲ್ಲಿ ಸಂಭವಿಸಿದ ಅವಘಡದಲ್ಲಿ ಸಾವಿಗೀಡಾದ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿದ್ದ ಸಚಿವರು ಸೋಮವಾರ ಸಂಜೆ ನಡೆದ ಈ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ತಡರಾತ್ರಿ ವಿಜಯಪುರ ನಗರಕ್ಕೆ ದೌಡಾಯಿಸಿದರು. ಅಲ್ಲದೇ, ಘಟನಾ ಸ್ಥಳಕ್ಕೆ ತೆರಳಿ ಮಧ್ಯರಾತ್ರಿ ಬಹಳ ಹೊತ್ತಿನವರೆಗೂ ರಕ್ಷಣಾ ಕಾರ್ಯಾಚರಣೆ ಪರಿಶೀಲನೆ ನಡೆಸಿದರು. ಘಟನೆಯ ಕುರಿತು ಜಿಲ್ಲಾಧಿಕಾರಿ ಟಿ. ಭೂಬಾಲನ್, ಎಸ್ಪಿ ಋಷಿಕೇಶ ಸೋನಾವಣೆ, ಜಿ. ಪಂ. ಸಿಇಓ ರಾಹುಲ ಶಿಂಧೆ ಅವರಿಂದ ಘಟನೆ ಮತ್ತು ನಂತರ ಕೈಗೊಳ್ಳಲಾದ ರಕ್ಷಣಾ ಕಾರ್ಯಾಚರಣೆಯ ಕುರಿತು ಸಂಪೂರ್ಣ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಸೇರಿದ್ದ ಉಳಿದ ಕಾರ್ಮಿಕರೊಂದಿಗೆ ಮಾತನಾಡಿದ ಸಚಿವರು, ಈ ಅವಘಡದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಾಗುವುದು. ಮೆಕ್ಕೆಜೋಳದ ರಾಶಿಯಡಿ ಸಿಲುಕಿರುವ ಎಲ್ಲ ಕಾರ್ಮಿಕರ ಶವಗಳನ್ನು ಹೊರತೆಗೆದು ಶವ ಪರೀಕ್ಷೆಯ ಬಳಿಕ ಅವರ ಮೂಲ ರಾಜ್ಯವಾದ ಬಿಹಾರಕ್ಕೆ ಗೌರವಪೂರಕವಾಗಿ ಕಳುಹಿಸಿ ಕೊಡಲಾಗುವುದು. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸಾಂತ್ವನ ಹೇಳಿದರು. ಅಲ್ಲದೇ, ಅವರಿಗೆ ನೈತಿಕವಾಗಿ ಧೈರ್ಯ ತುಂಬಿದರು.

ಈ ದುರ್ಘಟನೆಯಲ್ಲಿ ಸಾವಿಗೀಡಾದ ಕಾರ್ಮಿಕರ ಕುಟುಂಬಗಳಿಗೆ ರಾಜ್ಯ ಸರಕಾರದಿಂದ ಸೂಕ್ತ ಪರಿಹಾರ ಒದಗಿಸಲಾಗುವುದು. ಇದರ ಜೊತೆಗೆ ರಾಜಗುರು ಇಂಡಸ್ಟ್ರಿಸ್ ಮಾಲಿಕರಿಂದಲೂ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವನಾಗಿ ಸರಕಾರದಿಂದ ಎಲ್ಲ ರೀತಿಯ ನೆರವು ಒದಗಿಸುವುದಾಗಿ ಕಾರ್ಮಿಕರಿಗೆ ಭರವಸೆ ನೀಡಿದರು.

Latest Indian news

Popular Stories