ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೊದಲ ಹದಿನೈದು ದಿನಗಳಲ್ಲಿ ನಡೆದ ಹತ್ತು ಅವಾಂತರಗಳನ್ನು ಪಟ್ಟಿ ಮಾಡಿದ್ದಾರೆ.
ರಾಹುಲ್ ಗಾಂಧಿ ಪಟ್ಟಿ ಮಾಡಿರುವ 10 ಅವಾಂತರಗಳಲ್ಲಿ ನೀಟ್ ಅಕ್ರಮಗಳು, ಯುಜಿಸಿ ನೆಟ್ ಪೇಪರ್ ಸೋರಿಕೆ, ರೈಲು ಅಪಘಾತ, ನೀರಿನ ಬಿಕ್ಕಟ್ಟು ಸೇರಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳವಲ್ಲಿ ಬ್ಯುಸಿಯಾಗಿದ್ದಾರೆ. “ಎನ್‌ಡಿಎ ಮೊದಲ 15 ದಿನಗಳು! 1. ಭೀಕರ ರೈಲು ಅಪಘಾತ; 2. ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳು 3. ರೈಲುಗಳಲ್ಲಿ ಪ್ರಯಾಣಿಕರ ದುಃಸ್ಥಿತಿ 4. NEET ಹಗರಣ; 6. UGC ನೆಟ್ ಪೇಪರ್ ಸೋರಿಕೆ, 7. ಹಾಲು, ಬೇಳೆಕಾಳುಗಳು, ಅನಿಲ, ಟೋಲ್ ಶುಲ್ಕ ದುಬಾರಿ, 8. ಕಾಡ್ಗಿಚ್ಚು; 9. ನೀರಿನ ಬಿಕ್ಕಟ್ಟು; 10. ಬಿಸಿಗಾಳಿಯಿಂದ ನೂರಾರು ಸಾವುಗಳನ್ನು” ಉಲ್ಲೇಖಿಸಿ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
“ಮಾನಸಿಕವಾಗಿ ಬ್ಯಾಕ್‌ಫೂಟ್‌ನಲ್ಲಿರುವ ನರೇಂದ್ರ ಮೋದಿ ಅವರು ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ” ಎಂದು ರಾಯ್ ಬರೇಲಿ ಕಾಂಗ್ರೆಸ್ ಸಂಸದ ಆರೋಪಿಸಿದ್ದಾರೆ.
ಇಂಡಿಯಾ ಬಣ ಪ್ರಬಲ ವಿರೋಧ ಪಕ್ಷವಾಗಿದ್ದು, ಜನರ ಪರ ಧ್ವನಿಯನ್ನು ಎತ್ತುವುದನ್ನು ಮುಂದುವರಿಸುತ್ತದೆ ಮತ್ತು ಉತ್ತರದಾಯಿತ್ವವಿಲ್ಲದೆ ಪ್ರಧಾನಿ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“ನರೇಂದ್ರ ಮೋದಿ ಮತ್ತು ಅವರ ಸರ್ಕಾರದಿಂದ ಸಂವಿಧಾನದ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ ಮತ್ತು ಇದನ್ನು ಯಾವುದೇ ಸಂದರ್ಭದಲ್ಲೂ ನಾವು ಒಪ್ಪಿಕೊಳ್ಳುವುದಿಲ್ಲ. ಇಂಡಿಯಾ ಬಣ ತನ್ನ ಒತ್ತಡವನ್ನು ಮುಂದುವರೆಸುತ್ತದೆ. ಜನರ ಧ್ವನಿಯನ್ನು ಎತ್ತುತ್ತದೆ” ಎಂದು ಕಾಂಗ್ರೆಸ್ ನಾಯಕ ಪೋಸ್ಟ್ ಮಾಡಿದ್ದಾರೆ.