ನೀರಿನ ಕ್ಯಾನಿಗೆ ಇಲಿ ಪಾಷಾಣ ಬೆರೆಸಿದ 9ನೇ ತರಗತಿ ಬಾಲಕ; ಶಾಲೆಗೆ ರಜೆ ನೀಡಿದರೆ ಮನೆಗೆ ತೆರಳಲು ಕೃತ್ಯ

ಕೋಲಾರ: ಕೆಜಿಎಫ್ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೋಮವಾರ ನೀರು ಕುಡಿದು ಮೂವರು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಪ್ರಕರಣಕ್ಕೆ ಪೊಲೀಸ್ ತನಿಖೆಯಿಂದ ಹೊಸ ಆಯಾಮ ಸಿಕ್ಕಿದ್ದು, 9ನೇ ತರಗತಿಯ ಬಾಲಕನೊಬ್ಬ ನೀರಿಗೆ ಇಲಿ ಪಾಷಾಣ ಬೆರೆಸಿರುವುದು ಬೆಳಕಿಗೆ ಬಂದಿದೆ.

ಯಾವುದೇ ಅಹಿತಕರ ಘಟನೆ ನಡೆದರೆ ಶಾಲೆಗೆ ಕೆಲವು ದಿನ ರಜೆ ಘೋಷಿಸುತ್ತಾರೆ. ಆಗ ಮನೆಗೆ ಹೋಗಬಹುದು ಎಂದು ವಿದ್ಯಾರ್ಥಿ ಭಾವಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಮೂವರು ವಿದ್ಯಾರ್ಥಿಗಳು ಈಗ ಆರ್‌ಎಲ್‌ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾಲೆಯ ಆಡಳಿತ ವಿಭಾಗದಲ್ಲಿ ಇಟ್ಟಿದ್ದ ನೀರನ್ನು ಕುಡಿದು ಮೂವರು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎಂದು ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಕೆಎಂ ಶಾಂತರಾಜು ತಿಳಿಸಿದ್ದಾರೆ. ಇದಾದ ಬಳಿಕ ಪೊಲೀಸರು ಐಪಿಸಿ ಸೆಕ್ಷನ್ 328ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ತನ್ನ ಮನೆಯಲ್ಲಿ ಕೆಲವು ದಿನಗಳನ್ನು ಕಳೆದ ನಂತರ ಸೋಮವಾರ ವಸತಿ ಶಾಲೆಗೆ ಹಿಂತಿರುಗಿದ 9ನೇ ತರಗತಿಯ ಬಾಲಕ ಮನೆಯಿಂದ ಇಲಿ ಪಾಷಾಣವನ್ನು ತಂದು ಆಡಳಿತಾತ್ಮಕ ಬ್ಲಾಕ್‌ನಲ್ಲಿರುವ ನೀರಿನ ಕ್ಯಾನ್‌ಗೆ ಹಾಕಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಸಾಮಾನ್ಯವಾಗಿ ಅಲ್ಲಿ ವಿದ್ಯಾರ್ಥಿಗಳು ನೀರು ಕುಡಿಯಲು ಹೋಗುವುದಿಲ್ಲ. ಆದರೆ, ಆ ದಿನದಂದು ಮೂವರು ವಿದ್ಯಾರ್ಥಿಗಳು ಆ ಕ್ಯಾನ್‌ನಲ್ಲಿದ್ದ ನೀರು ಕುಡಿದು ಅಸ್ವಸ್ಥರಾದರು ಎಂದು ಅವರು ಹೇಳಿದರು.

ಶಾಲೆಯ ಕೆಲವು ಉದ್ಯೋಗಿಗಳು ಆ ದಿನ ಆಡಳಿತಾತ್ಮಕ ಬ್ಲಾಕ್‌ನಲ್ಲಿ ಬಾಲಕ ಅಡ್ಡಾಡುತ್ತಿದ್ದ ಎಂದು ಹೇಳಿಕೆ ನೀಡಿದ ನಂತರ ಪೊಲೀಸರು ಬಾಲಕನನ್ನು ವಿಚಾರಣೆ ನಡೆಸಿದ್ದರು ಎಂದು ಶಾಂತರಾಜು ಹೇಳಿದರು. ಪೋಷಕರಿಗೆ ಮಾಹಿತಿ ನೀಡಿದ ಬಳಿಕ ಬಾಲಕನನ್ನು ಸ್ಥಳೀಯ ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದ್ದು, ಸಮಾಲೋಚನೆಗಾಗಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

‘ಬಾಲಕನಿಗೆ ವಸತಿ ಶಾಲೆಯಲ್ಲಿ ಇರಲು ಇಷ್ಟವಿರಲಿಲ್ಲ’ ಎಂದು ಅವರು ಹೇಳಿದರು.

Latest Indian news

Popular Stories