ರೇವಣ್ಣ, ಬಾಬಣ್ಣ ಸೇರಿ ಮೂವರ ಬಂಧನ; 3ನೇ ಆರೋಪಿ ಬಗ್ಗೆ ಮಾಹಿತಿ ನೀಡಿದರೆ ತನಿಖೆ ಮೇಲೆ ಪರಿಣಾಮ- ಪರಮೇಶ್ವರ

ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಬೇಡಿಕೆಯನ್ನು ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಬುಧವಾರ ತಿರಸ್ಕರಿಸಿದ್ದಾರೆ.

ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರದ ಸಿಐಡಿ ಸಮರ್ಥವಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಕುಮಾರಸ್ವಾಮಿ ಅವರು 100ಕ್ಕೂ ಹೆಚ್ಚು ಪ್ರಶ್ನೆಗಳನ್ನು ಎತ್ತಿದ್ದಾರೆ. ಅವೆಲ್ಲಕ್ಕೂ ನಾನು ಉತ್ತರಿಸುವುದಿಲ್ಲ. ಅವರು ಸಿಬಿಐ ತನಿಖೆ ಮಾಡಬೇಕು ಎಂದು ಕೇಳಿದ್ದರು ನಾವು ಮಾಡುವುದಿಲ್ಲ. ಪ್ರಕರಣದ ತನಿಖೆ ನಡೆಸಲು ಎಸ್‌ಐಟಿ ಸಮರ್ಥವಾಗಿದೆ. ಸೂಕ್ತ ತನಿಖೆ ನಡೆಸುತ್ತೇವೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಹೊಳೆನರಸೀಪುರ ಜೆಡಿಎಸ್ ಶಾಸಕ ಹಾಗೂ ಪ್ರಜ್ವಲ್ ತಂದೆ ಎಚ್ ಡಿ ರೇವಣ್ಣ ಕೂಡ ಪ್ರಕರಣದಲ್ಲಿ ಆರೋಪಿಯಾಗಿದ್ದು, ಮೂರು ಮಕ್ಕಳ ತಾಯಿಯಾಗಿರುವ ಮಹಿಳೆಯನ್ನು ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಮೂವರನ್ನು ಬಂಧಿಸಲಾಗಿದೆ ಎಂದು ಪರಮೇಶ್ವರ ಹೇಳಿದ್ದಾರೆ.

ತನಿಖೆಯ ಪ್ರಗತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗೃಹ ಸಚಿವರು, ರೇವಣ್ಣ ಮತ್ತು ಅವರ ಸಹಾಯಕ ಸತೀಶ್ ಬಾಬಣ್ಣ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಮೂರನೇ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸುವುದರಿಂದ ತನಿಖೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಬಂಧಿತ ಮೂರನೇ ವ್ಯಕ್ತಿಯ ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿದರು.

ವಿಡಿಯೋ ಸೋರಿಕೆ ಮಾಡಿದವರ ವಿರುದ್ಧ ತನಿಖೆಯಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ, ನಾವು ಏನನ್ನೂ ಮುಚ್ಚಿಡಲು ಬಯಸುವುದಿಲ್ಲ. ಪೆನ್ ಡ್ರೈವ್‌ ಬಗ್ಗೆ ಸಂಪೂರ್ಣ ತನಿಖೆಯಾಗಲಿದೆ ಎಂದರು.

Latest Indian news

Popular Stories