ತ್ರಿವರ್ಣ ಧ್ವಜವನ್ನು ಮೊದಲಿನಿಂದಲೂ ಆರ್’ಎಸ್ಎಸ್ ವಿರೋಧಿಸುತ್ತಲೇ ಬಂದಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮೊದಲಿನಿಂದಲೂ ತ್ರಿವರ್ಣ ಧ್ವಜವನ್ನು ಆರ್’ಎಸ್ಎಸ್ ವಿರೋಧಿಸುತ್ತಲೇ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಆರೋಪಿಸಿದರು.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ಬಿಜೆಪಿ ಹಾಗೂ ಆರ್’ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಾರಂಭದಿಂದಲೇ ಆರ್.ಎಸ್.ಎಸ್ ನಾಯಕರು ತ್ರಿವರ್ಣ ಧ್ವಜವನ್ನು ವಿರೋಧಿಸುತ್ತಾ ಬಂದಿದ್ದರು ಆರ್.ಎಸ್.ಎಸ್ ನ ಎರಡನೇ ಸರಸಂಘಚಾಲಕರಾದ ಎಂ ಎಸ್ ಗೋಳ್ವಾಲ್ಕರ್ ಅವರು ತ್ರಿವರ್ಣ ಧ್ವಜವನ್ನು ನಮ್ಮ ರಾಷ್ಟ್ರದ ಧ್ವಜವೆಂದು ಒಪ್ಪಲು ಸಾಧ್ಯವಿಲ್ಲ ತಮ್ಮ ‘ಬಂಚ್ ಆಫ್ ಥಾಟ್ಸ್’ ಕೃತಿಯಲ್ಲಿ ಬರೆದಿದ್ದರು. ಭಾರತೀಯ ನಾಯಕರು ನಮ್ಮ ಕೈಗೆ ತ್ರಿವರ್ಣ ಧ್ವಜವನ್ನು ಕೊಡಬಹುದು. ಆದರೆ ನಾವ್ಯಾವತ್ತೂ ಅದನ್ನು ಗೌರವಿಸುವುದಿಲ್ಲ ಮತ್ತು ಅದನ್ನು ಒಪ್ಪಿಕೊಳ್ಳುವುದೂ ಇಲ್ಲ ಎಂದು 1947ರಲ್ಲಿಯೇ ಆರ್.ಎಸ್.ಎಸ್ ಮುಖವಾಣಿ ‘ದಿ ಆರ್ಗನೈಸರ್’ ಪತ್ರಿಕೆಯಲ್ಲಿ ಬರೆದುಕೊಂಡಿತ್ತು.

ಈ ಕಾರಣಕ್ಕಾಗಿಯೇ ನಾಗಪುರದಲ್ಲಿರುವ ಆರ್.ಎಸ್.ಎಸ್ ಕೇಂದ್ರ ಕಚೇರಿ ಮೇಲೆ 52 ವರ್ಷಗಳ ಕಾಲ ರಾಷ್ಟ್ರಧ್ವಜವನ್ನೇ ಹಾರಿಸಿರಲಿಲ್ಲ. 2001ರ ಜನವರಿ 26ರಂದು ರಾಷ್ಟ್ರಪ್ರೇಮಿ ಯುವದಳದ ಮೂವರು ಕಾರ್ಯಕರ್ತರು, ಬಲವಂತವಾಗಿ ಆರ್.ಎಸ್.ಎಸ್ ಕಚೇರಿಗೆ ನುಗ್ಗಿ, ಸಾಕಷ್ಟು ವಿರೋಧದ ನಡುವೆಯೂ ಅದರ ಮೇಲೆ ತ್ರಿವರ್ಣ ಧ್ವಜ ಹಾರಿಸಿ, ಆರ್.ಎಸ್.ಎಸ್ ಗೆ ಸೆಡ್ಡು ಹೊಡೆದಿದ್ದರು. ಅವರ ಮೇಲೆ ಆರ್.ಎಸ್.ಎಸ್ ಕೇಸು ಕೂಡಾ ದಾಖಲಿಸಿತ್ತು ಎಂದು ಹೇಳಿದ್ದಾರೆ.

ರಾಷ್ಟ್ರಧ್ವಜ ಹಾಗೂ ರಾಷ್ಟ್ರಪಿತನಿಗೆ ನಿರಂತರವಾಗಿ ಅಪಮಾನ ಎಸಗುತ್ತಾ ಬಂದಿರುವ ಬಿಜೆಪಿ ಹಾಗೂ ಸಂಘ ಪರಿವಾರಗಳು ಇಂದು ರಾಷ್ಟ್ರಧ್ವಜವನ್ನೇ ತಾಲಿಬಾನ್‌ ಧ್ವಜಕ್ಕೆ ಹೋಲಿಸುತ್ತಿರುವುದು ಅವರ ರೋಗಗ್ರಸ್ತ ಚಿಂತನೆಗಳನ್ನು ಸೂಚಿಸುತ್ತಿದೆ. ತ್ರಿವರ್ಣ ಧ್ವಜವನ್ನು ಆರಂಭದಿಂದಲೂ ವಿರೋಧಿಸುತ್ತಲೇ ಬಂದ ಆರ್‌.ಎಸ್‌.ಎಸ್‌ ಈಗ ಅದನ್ನು ಬಹಿರಂಗವಾಗಿ ವಿರೋಧಿಸಲು ಧರ್ಮವನ್ನು ಗುರಾಣಿಯಾಗಿ ಬಳಸುತ್ತಿದೆ.

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಈ ರೀತಿಯ ಮತೀಯ ಉದ್ವಿಗ್ನತೆಯನ್ನು ಸೃಷ್ಟಿಸಿ ಅದರ ಲಾಭ ಪಡೆಯುವ ಹುನ್ನಾರ ರಾಜ್ಯದ ಬಿಜೆಪಿ ನಾಯಕರು ಹಾಗೂ ಸಂಘ ಪರಿವಾರದ್ದಾಗಿದೆ. ಈ ಹಿಂದೆ ವಿಧಾನಸಭಾ ಚುನಾವಣೆ ವೇಳೆಯೂ ಇಂತಹದ್ದೇ ಪ್ರಯತ್ನಗಳಿಗೆ ಬಿಜೆಪಿ ಕೈ ಹಾಕಿದ್ದನ್ನು ಮಂಡ್ಯದ ಜನತೆ ಮರೆತಿಲ್ಲ.

ಬಿಜೆಪಿಯ ಇಂತಹ ಮತೀಯ ಸಂಚುಗಳಿಗೆ ಜೆಡಿಎಸ್‌ ಕೂಡ ಬಹಿರಂಗವಾಗಿಯೇ ಕೈಜೋಡಿಸಿರುವುದು ಆ ಪಕ್ಷದ ಅಧಿಕಾರದ ಹಪಾಹಪಿ, ಚಿಂತನಾ ದಾರಿದ್ರ್ಯ, ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಜೆಡಿಎಸ್‌ ಪಕ್ಷದ ವರಿಷ್ಠರು ತಾವು ಪ್ರತಿಯೊಂದು ವಿಚಾರದಲ್ಲಿಯೂ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರ ಅಣತಿಯಂತೆ ನಡೆಯುವುದಾಗಿ ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಇದು ಜೆಡಿಎಸ್ ಪಕ್ಷದ ಅಸಲಿ ಹೈಕಮಾಂಡ್‌ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಎನ್ನುವುದನ್ನು ನಿಚ್ಚಳಗೊಳಿಸಿದೆ. ಬಿಜೆಪಿಯವರು ನೀಡಿರುವ ಕೇಸರಿ ಶಾಲನ್ನು ಹೊದ್ದು ಸಂಭ್ರಮಿಸುತ್ತಿರುವ ಜೆಡಿಎಸ್‌ ನಾಯಕರಿಗೆ ಸಾಮರಸ್ಯ, ಸೌಹಾರ್ದದ ನೆಲೆಯಾದ ಕರ್ನಾಟಕಕ್ಕೆ ತಾವು ಎಸಗುತ್ತಿರುವ ಅಪಚಾರದ ಅರಿವೇ ಇಲ್ಲವಾಗಿದೆ.

ಬಿಜೆಪಿ, ಸಂಘ ಪರಿವಾರ ಹಾಗೂ ಜೆಡಿಎಸ್ ಒಗ್ಗೂಡಿಸಿ ರೂಪಿಸಿರುವ ಈ ಮತೀಯ ಸಂಚನ್ನು ಮಂಡ್ಯದ ಜನತೆ ವಿಫಲಗೊಳಿಸಲಿದ್ದಾರೆ. ಸ್ವಾತಂತ್ರ್ಯ ಚಳವಳಿಯ ಕಾಲಘಟ್ಟದಿಂದಲೂ ಧಾರ್ಮಿಕ ಸಾಮರಸ್ಯ, ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಮಂಡ್ಯದ ಭೂಮಿ ರೈತ ಚಳವಳಿಯೂ ಸೇರಿದಂತೆ ನೂರಾರು ಪ್ರಗತಿಪರ ಚಳವಳಿಗೆ ತವರಾಗಿರುವ ನೆಲ.

ಸಂವಿಧಾನ, ಶಾಂತಿ, ಸಾಮರಸ್ಯಗಳಲ್ಲಿ ಗಾಢವಾದ ನಂಬಿಕೆ ಇರಿಸಿರುವ ಗಾಂಧೀವಾದಿ ಚಿಂತನೆಗಳಿಂದ ಪ್ರೇರಣೆ ಪಡೆದ ಭೂಮಿ. ಮಂಡ್ಯದ ಜನತೆಯು ಸಂವಿಧಾನ ವಿರೋಧಿ ಶಕ್ತಿಗಳಿಗೆ, ಗಾಂಧಿ ವಿರೋಧಿ ಚಿಂತನೆಗಳಿಗೆ ಎಂದಿಗೂ ಜಾಗ ನೀಡುವುದಿಲ್ಲ. ಧರ್ಮದ ಹೆಸರಿನಲ್ಲಿ ಕೋಮುವಾದಿ ರಾಜಕಾರಣಕ್ಕೆ ಆಸ್ಪದ ಮಾಡಿಕೊಡುವುದಿಲ್ಲ ಎನ್ನುವ ದೃಢವಾದ ನಂಬಿಕೆ ನನ್ನದು ಎಂದು ತಿಳಿಸಿದ್ದಾರೆ.

Latest Indian news

Popular Stories