ಸಂತೆಕಟ್ಟೆ ಅಂಡರ್‌ಪಾಸ್ ಅವ್ಯವಸ್ಥೆ | ‘ರಾತ್ರಿ ಹಗಲು ಬಿಡಿ, ಹಗಲಿನಲ್ಲೂ ಸರಿಯಾಗಿ ಕೆಲಸ ಆಗುತ್ತಿಲ್ಲ’| “ನಿಧನಗತಿ ಕಾಮಗಾರಿ ವ್ಯಾಪರಸ್ತರಿಗೆ ಭಾರಿ” ನಷ್ಟ – ಪ್ರತಿಭಟನೆ

ಉಡುಪಿ, ಎ.29: ಸಂತೆಕಟ್ಟೆ ಅಂಡರ್‌ಪಾಸ್ ಅವ್ಯವಸ್ಥೆಯನ್ನು ವಿರೋಧಿಸಿ ಕಲ್ಯಾಣಪುರ ಸಂತೆಕಟ್ಟೆ ನಾಗರೀಕ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಸ್ಥಳೀಯರು, ವ್ಯಾಪಾರಸ್ಥರು, ವಿದ್ಯಾರ್ಥಿಗಳು, ರಿಕ್ಷಾ ಚಾಲಕರು ಇಂದು ಸಂತೆಕಟ್ಟೆ ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ ನಡೆಸಿದರು.

ಸಂತೆಕಟ್ಟೆ ನಾಗರೀಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ವಿನೋದ್ ಕುಮಾರ್ ಮಾತನಾಡಿ, ‘ಇಲ್ಲಿನ ಅಂಡರ್‌ಪಾಸ್ ಕಾಮಗಾರಿ ಆರಂಭವಾಗಿ ಎರಡು ವರ್ಷಗಳು ಆಗುತ್ತ ಬಂತು. ತುಂಬಾ ನಿಧನವಾಗಿ ಕಾಮಗಾರಿ ನಡೆಯುತ್ತಿದೆ. ಸರ್ವಿಸ್ ರಸ್ತೆ ಸಂಪೂರ್ಣ ಮಾಡದೇ ಉಳಿದ ರಸ್ತೆ ಬಂದ್ ಮಾಡಿದ್ದಾರೆ. ಇದರಿಂದ ದಿನನಿತ್ಯ ಟ್ರಾಫಿಕ್ ಜಾಮ್ ಆಗುತ್ತಿದೆ. ಕೇವಲ ಬೆರಳೆಣಿಕೆ ಜನರಿಂದ ಕಾಮ ಗಾರಿ ನಡೆಸಲಾಗುತ್ತಿದೆ. ಇಲ್ಲಿ ರಾತ್ರಿ ಹಗಲು ಬಿಡಿ, ಹಗಲಿನಲ್ಲೂ ಸರಿಯಾಗಿ ಕೆಲಸ ಆಗುತ್ತಿಲ್ಲ’ ಎಂದು ಆರೋಪಿಸಿದರು.

‘ಸಂತೆಕಟ್ಟೆಯಲ್ಲಿ ಕೆಲವು ಅಂಗಡಿಗಳು ಬಂದ್ ಆಗಿ ಇಂದಿಗೆ ಒಂದೂವರೆ ವರ್ಷಗಳಾಗುತ್ತ ಬಂತು. ವ್ಯಾಪಾರ ಇಲ್ಲದೇ ನಷ್ಟ ಅನುಭವಿಸುತ್ತಿದ್ದಾರೆ. ಊಟಕ್ಕೆ ಗತಿ ಇಲ್ಲದೆ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ನಾವು ಸಾಂಕೇತಿಕ ವಾಗಿ ಪ್ರತಿಭಟನೆ ಮಾಡಿದ್ದೇವೆ. ಇದಕ್ಕೆ ಸ್ಪಂದಿಸದಿದ್ದರೆ ಶಾಲಾ ಕಾಲೇಜು ಮಕ್ಕಳನ್ನು ಒಟ್ಟು ಸೇರಿಸಿ ಹೆದ್ದಾರಿ ತಡೆ ಮಾಡಿ ಹೋರಾಟ ನಡೆಸಲಾಗುವುದು’ ಎಂದು ಅವರು‌ ಎಚ್ಚರಿಕೆ ನೀಡಿದರು.

ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ವಿನ್ಸೆಂಟ್ ಆಳ್ವ ಮಾತನಾಡಿ, ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದೆ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಸಮಸ್ಯೆ ತಂದೊಡಿದ್ದಾರೆ. ಇದರಿಂದ ನಮ್ಮ ಕಾಲೇಜಿನ ಮಕ್ಕಳು ಕಷ್ಟ ಎದುರಿಸುತ್ತಿದ್ದಾರೆ. ಬಸ್ ನಿಲುಗಡೆ ಗೊಂದಲದಿಂದ ಎರಡು ಕಿ.ಮೀ. ದೂರದಲ್ಲೇ ಬಸ್ ಇಳಿದು ಕಾಲೇಜಿಗೆ ನಡೆದುಕೊಂಡು ಬರುತ್ತಿದ್ದಾರೆ. ಸಂತೆಕಟ್ಟೆ ರಸ್ತೆದಾಟುವ ಸಮಸ್ಯೆಯಿಂದಾಗಿಯೇ ನಮ್ಮ ಸಂಸ್ಥೆಯಲ್ಲಿ ಈ ಬಾರಿ ತುಂಬಾ ಕಡಿಮೆ ದಾಖಲಾತಿಯಾಗಿದೆ. ಇದರಿಂದ ಸಂಸ್ಥೆಗೆ ತುಂಬಾ ಅನ್ಯಾಯ ಆಗಿದೆ ಎಂದು ಆರೋಪಿಸಿದರು.
ಸ್ಥಳಕ್ಕೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹಾಗೂ ಹೆದ್ದಾರಿ ಕಾಮ ಗಾರಿ ಇಂಜಿನಿಯರ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿದರು. ಕೂಡಲೇ ಇಲ್ಲಿ ಸರ್ವಿಸ್ ರಸ್ತೆ ನಿರ್ಮಿಸಿ ಸಂಚಾರ ಸಮಸ್ಯೆ ಸರಿ ಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವರೊನಿಕಾ ಕರ್ನೆಲಿಯೋ, ಮಲ್ಲಿಕಾ ಪೂಜಾರಿ ರಾಘವೇಂದ್ರ ಅಮೀನ್ ಧೀರಜ್ ಕೆ ಎಸ್., ರತನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

IMG 20240429 WA0062 Featured Story, Udupi IMG 20240429 WA0061 Featured Story, Udupi IMG 20240429 WA0064 Featured Story, Udupi IMG 20240429 WA0065 Featured Story, Udupi IMG 20240429 WA0067 Featured Story, Udupi

Latest Indian news

Popular Stories