ಸಿದ್ದರಾಮಯ್ಯ ವಿರುದ್ಧ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ

ಚಿಕ್ಕಮಗಳೂರು :ಸಿದ್ದರಾಮಯ್ಯ ಮರ್ಯಾದೆ ಇಲ್ಲದ, ಬೇಜವಾಬ್ದಾರಿ ಮುಖ್ಯಮಂತ್ರಿ ಎಂದು ಕೇಂದ್ರ ಕೃಷಿ‌ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

ಬುಧವಾರ ನಗರದಲ್ಲಿ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಯೋಜನೆಗಳನ್ನು ಘೋಷಿಸು ವಾಗ ನಿಮ್ಮ ತಲೆಯಲ್ಲಿ ಮೆದುಳು ಇರಲಿಲ್ವಾ ಎಂದು ಪ್ರಶ್ನಿಸಿದರು.

ಮೋದಿ ಅಕ್ಕಿ ಸೇರಿ ನೀವು 10 ಕೆ.ಜಿ. ಅಕ್ಕಿ ಕೊಡಬೇಡಿ, ಕೇಂದ್ರ ದ 5 ಕೆ.ಜಿ. ಅಕ್ಕಿ ಜೊತೆ ನೀವು 10 ಕೆ.ಜಿ.ಕೊಡಿ, ಒಬ್ಬರಿಗೆ 15 ಕೆ.ಜಿ.ಅಕ್ಕಿ ಕೊಡಿ ಎಂದರು. ಅಕ್ಕಿ ಕೊಡಲು ಆಗದಿದ್ದರೆ ಅಧಿಕಾರ ಬಿಟ್ಟು ತೊಲಗಿ, ಒಂದೇ ತಿಂಗಳಿಗೆ ರಾಜ್ಯದಲ್ಲಿ ಅರಾಜಕತೆ ತುಂಬಿದೆ. ಕಾಂಗ್ರೆಸ್ಸಿಗರಿಗೆ ಮಾನ ಮರ್ಯಾದೆ ಇಲ್ಲ, ವೋಟು ತೆಗೆದುಕೊಂಡು ಜನರಿಗೆ ಮೋಸ ಮಾಡಿದ್ದೀರಾ. ಸಿದ್ದರಾಮಯ್ಯ ನವರೇ ಬೇಜವಾಬ್ದಾರಿ ಹೇಳಿಕೆಗಳನ್ನು ವಾಪಸ್ಸು ತೆಗೆದುಕೊಳ್ಳಿ ಎಂದರು.


ರಾಜ್ಯ ಸರ್ಕಾರ ಒಂದು ಬೇಜವಾಬ್ದಾರಿಯ ಸರ್ಕಾರ. ಚುನಾವಣೆಯನ್ನ ಗೆಲ್ಲುವುದಕ್ಕೆ ಇಲ್ಲದ ಭರವಸೆ ಕೊಟ್ಟು, ಆಸೆ ತೋರಿಸಿದ್ರಿ, ಮಹಿಳೆಯರ ಬಸ್ಸಿಗೆ ಪಾಸ್ ಕೇಳುತ್ತಿದ್ದಾರೆ, ಸರ್ಟಿಫಿಕೇಟ್ ಕೇಳ್ತಿದ್ದಾರೆ. ನಾನು ಮಹಿಳೆ ಅನ್ನೋದಕ್ಕೆ ನನಗೆ ಸರ್ಟಿಫಿಕೇಟ್ ಬೇಕಿಲ್ಲ ಎಂದರು.

ಅಕ್ಕಿ ಕೊಡೋದಕ್ಕೆ ಕೇಂದ್ರ ಸರ್ಕಾರ ಕೊಡುತ್ತಿಲ್ಲ ಎನ್ನುತ್ತಿದ್ದಾರೆ. ಈಗ ಯಾಕೆ ನೀವು ಮೋದಿ ಕಡೆ ಬೆರಳು ತೋರಿಸುತ್ತೀರಾ, ಯಾವುದೇ ಮುಂದಾಲೋಚನೆ ಇಲ್ಲದೆ ಘೋಷಿಸಿ ಇವತ್ತು ಮೋದಿ ಕಡೆ ತೋರಿಸುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಅಂದೆ ಕೇಳಿದ್ವಿ, ಇವಕ್ಕೆಲ್ಲಾ ಹಣ ಎಲ್ಲಿಂದ ತರುತ್ತೀರಾ ಎಂದು ಇವತ್ತು ಅಕ್ಕಿ, ದುಡ್ಡು, ವಿದ್ಯುತ್ ಎಲ್ಲದಕ್ಕೂ ಮೋದಿ ಕಡೆ ತೋರಿಸುತ್ತಿದ್ದೀರಿ, ಎಲ್ಲದಕ್ಕೂ ಮೋದಿ ತೋರಿಸುವುದಾದರೆ, ನೀವು ಗ್ಯಾರಂಟಿ ಕಾರ್ಡ್ ಏಕೆ ಹಂಚಿದ್ರಿ ಎಂದು ಪ್ರಶ್ನಿಸಿದರು.

ಯಾರಿಗೆ ಮೋಸ ಮಾಡಲು, ಯಾರ ಮೂಗಿಗೆ ತುಪ್ಪ ಸವರಲು ಹಂಚುದ್ರಿ, ಬಫರ್ ಸ್ಟಾಕ್‌ ಇರೋದು ನೆರೆ, ಬರ, ಯುದ್ಧದ ಸಂದರ್ಭದಲ್ಲಿ ಬಳಕೆಗೆ, ಬೇರೆ ರಾಜ್ಯ ಹಾಗೂ‌ ನಮ್ಮ ರಾಜ್ಯದ ರೈತರ ಅಕ್ಕಿ ಖರೀದಿಸಿ ಎಂದು ಸಲಹೆ ನೀಡಿದರು.

Latest Indian news

Popular Stories