ಬೆಂಗಳೂರು, ನವೆಂಬರ್ 27 : ಮಧ್ಯಾಹ್ನದ ಊಟದ ಬಿಡುವಿನಲ್ಲಿ ಊಟಕ್ಕೆಂದು ಮನೆಗೆ ತೆರಳಲು ಎದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಳಿಕ ಅಹವಾಲು ಬಂದಿರುವವರ ಸಂಖ್ಯೆ ಇನ್ನೂ ಬಹಳಷ್ಟಿದೆ ಎಂದು ಮಾಹಿತಿ ಲಭ್ಯವಾದ ಕೂಡಲೇ ಅಹವಾಲು ಸ್ವೀಕರಿಸುವ ಟೇಬಲ್ಲಿಗೇ ಊಟ ತರಿಸಿಕೊಂಡು ಅಲ್ಲೇ ಕುಳಿತು ಊಟ ಸೇವಿಸಿದರು.
ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾ ದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆತಿದ್ದು, 3500 ಕ್ಕೂ ಹೆಚ್ಚು ಅರ್ಜಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದು ಸ್ವೀಕರಿಸಿ, ಪರಿಹಾರಕ್ಕೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿರುತ್ತಾರೆ. ಬೆಳಿಗ್ಗೆ 10.00 ಗಂಟೆಗೆ ಆರಂಭಗೊಂಡು, ಜನಸ್ಪಂದನ ಕಾರ್ಯಕ್ರಮವು ಜನರ ಸಮಸ್ಯೆಯ ಪರಿಹಾರಕ್ಕೆ ಉತ್ತಮ ವೇದಿಕೆ ಆಯಿತು.
ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಅಧಿಕಾರಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಸ್ಪಂದನ ಕಾರ್ಯಕ್ರಮವು ಎರಡು ತಿಂಗಳ ಹಿಂದಯೇ ನಡೆಯಬೇಕಿತ್ತು. ಜಿಲ್ಲಾ ಉಸ್ತುವಾರಿ ಸಚಿವರಿಗೂ ಸಹ ತಮ್ಮ ಜಿಲ್ಲೆಗಳಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಸಲು ಪತ್ರವನ್ನು ಬರೆದು ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಲು ತಿಳಿಸಲಾಗಿತ್ತು. ಅದರಂತೆ ಜಿಲ್ಲಾ ಉಸ್ತುವಾರಿ ಸಚಿವರು ಜನತಾ ದರ್ಶನ ಕಾರ್ಯಕ್ರಮವನ್ನು ನಡೆಸಿ, ಬಹುತೇಕ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ನೀಡಿರುತ್ತಾರೆ ಎಂದು ಹೇಳಿದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ಹಲವು ವೈದ್ಯಕೀಯ ವೆಚ್ಚ, ಕಂದಾಯ ಹಾಗೂ ಪೊಲೀಸ್ ಇಲಾಖೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳೇ ಹೆಚ್ಚಾಗಿ ಬಂದಿವೆ. ಇವತ್ತು ನಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಜನರಿಂದ 3500 ಅರ್ಜಿಗಳು ಬಂದಿದ್ದು, ಕಾನೂನಿನಲ್ಲಿ ಅವಕಾಶವಿದ್ದರೆ, ಪರಿಹಾರ ನೀಡಲು ಕ್ರಮವಹಿಸಬೇಕು. ಇಲ್ಲದಿದ್ದಲ್ಲಿ, ಯಾವ ಕಾರಣಕ್ಕೆ ಕ್ರಮವಹಿಸಲು ಸಾಧ್ಯವಿಲ್ಲ ಎಂಬುವುದನ್ನು ಮುಖ್ಯಮಂತ್ರಿಯವರ ಕಚೇರಿಗೆ ತಿಳಿಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಗಳು ಸ್ಥಳೀಯ ಹಂತದಲ್ಲಿ ಸಮಸ್ಯೆಗಳಿಗೆ ಪರಿಹಾರಕ್ಕೆ ಕ್ರಮವಹಿಸಬೇಕು. ಪೊಲೀಸ್ ಇಲಾಖೆಯ ಸಮಸ್ಯೆಯೂ ಸಹ ಸ್ಥಳೀಯ ಹಂತದಲ್ಲಿ ಬಗೆಹರಿಸುವ ಸಮಸ್ಯೆಗಳೆ ಆಗಿದ್ದು, ಇಂದು ನಡೆದ ಜನಸ್ಪಂದನ ಕಾರ್ಯಕ್ರಮದ ಅರ್ಜಿಗಳಿಗೆ ಒಂದು ವಾರ ಅಥವಾ ಹದಿನೈದು ದಿನದಲ್ಲಿ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ, ಪರಿಹಾರಕ್ಕೆ ನೀಡಲು ಯಾಕೆ ಸಾಧ್ಯವಿಲ್ಲ ಎಂದು ಲಿಖಿತ ರೂಪದಲ್ಲಿ ಪತ್ರವನ್ನು ನೀಡಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಜನಸ್ಪಂದನ ಕಾರ್ಯಕ್ರಮವನ್ನು ನಡೆಸಲಾಗುವುದು. ನಾನೂ ಸಹ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಪರಿಹಾರಕ್ಕೆ ಸಂಬಂಧಿಸಿದಂತೆ ಯಾವ ಕ್ರಮವನ್ನು ಅಧಿಕಾರಿಗಳು ಮಾಡಿರುವ ಕುರಿತು ಪರಿಶೀಲನೆ ನಡೆಸುತ್ತೇನೆ ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಳ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಶಾಲಿನಿ ರಜನೀಶ್ ಸೇರಿದಂತೆ ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.