ಹೂಡೆ: “ಫ್ರೇಮಿಂಗ್ ಅಕಾಡೆಮಿಯಾ” ಉನ್ನತ ಶಿಕ್ಷಣ ಜಾಗೃತಿ ಅಭಿಯಾನಕ್ಕೆ ಚಾಲನೆ
ಉಡುಪಿ: ಎಸ್.ಐ.ಓ ಉನ್ನತ ಶಿಕ್ಷಣಕ್ಕೆ ಒತ್ತು ನೀಡಿ ಈ ಅಭಿಯಾನವನ್ನು ನಡೆಸುತ್ತಿದ್ದು ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಉನ್ನತ ಶಿಕ್ಷಣ ಪಡೆಯುವಂತಾಗಬೇಕು. ಆಧುನಿಕವಾಗಿ ಮುಂದುವರಿದಿರುವ ಈ ಕಾಲದಲ್ಲೂ ಉನ್ನತ ಶಿಕ್ಷಣದ ಕುರಿತು ಜಾಗೃತಿ ಮೂಡಿಸಬೇಕಾಗಿರುವುದು ನಿಜಕ್ಕೂ ವಿಷಾದನೀಯ. ಆದರೂ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವಂತಾಗಲು ಇಂತಹ ಜಾಗೃತಿ ಅಭಿಯಾನಗಳು ಅತ್ಯಗತ್ಯ ಎಂದು ಎಸ್.ಐ.ಓ ರಾಷ್ಟ್ರೀಯ ಅಧ್ಯಕ್ಷರಾದ ರಮೀಝ್ ಇಕೆ ಹೇಳಿದರು.
ಅವರು ಹೂಡೆಯ ಸಾಲಿಹಾತ್ ಮೈದಾನದಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ, ಕರ್ನಾಟಕ ವತಿಯಿಂದ ಹಮ್ಮಿಕೊಂಡಿರುವ ರಾಜ್ಯ ಮಟ್ಟದ “ಫ್ರೇಮಿಂಗ್ ಅಕಾಡೆಮಿಯ” ಉನ್ನತ ಶಿಕ್ಷಣ ಜಾಗೃತಿ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡುವ ಮುಖಾಂತರ ಚಾಲನೆ ನೀಡಿ ಮಾತನಾಡಿದರು.
ಮುಂದುವರಿದು ಮಾತನಾಡಿದ ಅವರು, “ಈ ದೇಶದ ಉನ್ನತ ವಿಶ್ವವಿದ್ಯಾಲಯಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಜ್ಞಾನವು ಮುಸ್ಲಿಮರು ಕಳೆದಕೊಂಡ ಸಂಪತ್ತು ಅದು ಎಲ್ಲಿ ಸಿಕ್ಕಿದರೂ ಪಡೆದುಕೊಳ್ಳಬೇಕೆಂಬ ಪ್ರವಾದಿ ಮುಹಮ್ಮದ್ ಪೈಗಂಬರರ ಸಂದೇಶ ಅನುಸರಿಸುವ ಸಮುದಾಯ ಉನ್ನತ ಶಿಕ್ಷಣದ ಕೇಂದ್ರಗಳಿಂದ ದೂರ ಉಳಿದಿರುವು ನಿಜಕ್ಕೂ ಖೇದಕರವಾಗಿದೆ ಎಂದರು.
ಶಿಕ್ಷಣದ ಉದ್ದೇಶವನ್ನು ಸಂಕುಚಿತಗೊಳಿಸಲಾಗುತ್ತಿದೆ. ಶಿಕ್ಷಣ ಎಂಬುವುದು ಕೇವಲ ವೃತ್ತಿಗೆ ಮೀಸಲಾಗಿಸುವ ಸಂಕುಚಿತತೆ ಹೆಚ್ಚಾಗುತ್ತಿದೆ. ಬದಲಾಗಿ ಅದೊಂದು ಸಮಾಜವನ್ನು ಅರಿಯುವ ಸಾಧನವಾಗಬೇಕು. ಸಮಾಜವನ್ನು ಅರಿತು ಆ ಸಮಾಜಕ್ಕೆ ಕೊಡುಗೆ ನೀಡುವ, ಸಮುದಾಯದ ಸಬಲೀಕರಣದ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸುವ ಮಾನವ ಸಂಪನ್ಮೂಲ ಸೃಷ್ಟಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಸಾಚಾರ್ ಸಮಿತಿಯ ವರದಿ ಬಂದು 20 ವರ್ಷಗಳು ಸಂದವು. ಆ ವರದಿಯಲ್ಲಿ ನಮ್ಮ ಶ್ರೈಕ್ಷಣಿಕ ಸ್ಥಿತಿ ತೀರಾ ಹಿಂದುಳಿದ ಕುರಿತು ಬೆಳಕು ಚೆಲ್ಲಲಾಯಿತು. ತೀವ್ರ ತರವಾದ ಚರ್ಚೆಗಳು ಕೂಡ ನಡೆದಿದೆ. ಆದರೆ ನಮ್ಮ ಸಮುದಾಯ ಆ ನಿಟ್ಟಿನಲ್ಲಿ ಚಿಂತಿಸದ ಪರಿಣಾಮ ಇನ್ನು ಕೂಡ ಶ್ರೈಕ್ಷಣಿಕ ಜಾಗೃತಿ ಮೂಡಿಸಬೇಕಾದ ಸ್ಥಿತಿ ಇದೆ. ರಾಜಕೀಯ, ಸಾಮಾಜಿಕ, ಧಾರ್ಮಿಕ ನಾಯಕತ್ವ ಇದರಲ್ಲಿ ಸಂಪೂರ್ಣ ಸೋತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ದೇಶದ ಉನ್ನತ ವಿಶ್ವವಿದ್ಯಾಲಯ, ಐಐಟಿ, ಏಮ್ಸ್ ನಂತರ ಶ್ರೈಕ್ಷಣಿಕ ಕೇಂದ್ರಗಳಲ್ಲಿ ಕಲಿತು ಸಮಾಜಕ್ಕೆ ಕೊಡುಗೆ ನೀಡಬಲ್ಲ ನಾಯಕರನ್ನು ಸೃಷ್ಟಿಸಬೇಕಾಗಿದೆ. ಆ ಹಿನ್ನಲೆಯಲ್ಲಿ ಇಂತಹ ಶ್ರೈಕ್ಷಣಿಕ ಅಭಿಯಾನಗಳಿಗೆ ದೊಡ್ಡ ಮಟ್ಟದಲ್ಲಿ ಬೆಂಬಲಿಸಬೇಕೆಂದು ಕರೆ ನೀಡಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಎಸ್.ಓ ರಾಜ್ಯಾಧ್ಯಕ್ಷರಾದ ಝೀಶಾನ್ ಅಖಿಲ್ ಸಿದ್ಧೀಕಿ, “ಉನ್ನತ ಶಿಕ್ಷಣ ವಿಷಯಕ್ಕೆ ಬಂದಾಗ ಸಮುದಾಯ ಬಹಳಷ್ಟು ಹಿಂದುಳಿದಿದೆ. ಕೇವಲ ಪದವಿ ಪಡೆದರೆ ಸಾಕಾಗದು. ಪ್ರತಿಯೊರ್ವ ವಿದ್ಯಾರ್ಥಿಯು ಉನ್ನತ ಶಿಕ್ಷಣ ಪಡೆಯುವ ವಾತಾವರಣ ನಿರ್ಮಿಸಬೇಕಾಗಿದೆ” ಎಂದು ಕರೆ ನೀಡಿದರು.
“ವಿದ್ಯಾರ್ಥಿಗಳು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಮುಂದಾಗಬೇಕು. ಅದಕ್ಕಾಗಿ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಸುರಕ್ಷಿತ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚು ಮುತುವರ್ಜಿ ವಹಿಸಬೇಕೆಂದು” ಆಗ್ರಹಿಸಿದರು.
“ನಮ್ಮ ವಿಚಾರ, ಸೈದ್ದಾಂತಿಕಗಳೊಂದಿಗೆ ಬದುಕಬೇಕಾದರೆ ವಿಶ್ವವಿದ್ಯಾಲಯದಲ್ಲಿ ಓದಿ ನಮ್ಮ ವಿಚಾರಗಳನ್ನು ಮತ್ತಷ್ಟು ಸಧೃಡಗೊಳಿಸಬೇಕು. ನಾವು ಸಂಶೋಧನಾ ಕ್ಷೇತ್ರಗಳಲ್ಲಿ ಮುಂದುವರಿದು ನಮ್ಮ ಆಸಕ್ತಿಯ ವಿಷಯಗಳಲ್ಲಿ ಪಿ.ಎಚ್.ಡಿ ಪದವಿಗಳನ್ನು ಹೊಂದಿ ಸಮಾಜಕ್ಕೆ ಅತ್ಯಮೂಲ್ಯ ಕೊಡುಗೆ ನೀಡಬೇಕಾದ ಅಗತ್ಯವಿದೆ.”
ಉನ್ನತ ಶಿಕ್ಷಣ ಪಡೆದು ಸಬಲೀಕರಣ ಸಾಧಿಸಿದಾಗ ಮಾತ್ರ ಸಮುದಾಯ ಮತ್ತಷ್ಟು ಬಲಿಷ್ಠವಾಗಲು ಸಾಧ್ಯ. ದೇಶದಲ್ಲಿರುವ ಸಮಸ್ಯೆಗಳನ್ನು ಎದುರಿಸುತ್ತ ಸಮಾಜಕ್ಕೆ, ದೇಶಕ್ಕೆ ಕೊಡುಗೆ ನೀಡಬೇಕಾದ ಜವಾಬ್ದಾರಿ ಮುಖ್ಯವಾಗಿ ಮುಸ್ಲಿಂ ಸಮುದಾಯದ ಮೇಲಿದೆ. ಆ ನಿಟ್ಟಿನಲ್ಲಿ ಈ ರಾಜ್ಯದ ಹಿಂದುಳಿದ, ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಲ್ಲಿ ಉನ್ನತ ಶಿಕ್ಷಣದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಅಭಿಯಾನ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು, ಪೋಷಕರು ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಕರೆ ನೀಡಿದರು.
ನಂತರ ಪಿ.ಎಚ್.ಡಿ ಪದವಿ ಪಡೆದ ಡಾ.ದಾದಾ ಹಯಾತ್ ಬಾವಜಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂತಹ ಅಭಿಯಾನ ಈ ಕಾಲಘಟ್ಟದ ಅವಶ್ಯಕತೆಯಾಗಿದೆ. ಉನ್ನತ ಶಿಕ್ಷಣ ಎಂಬುವುದು ವಿಮೋಚನೆಯ ಹಾದಿಯಾಗಿದ್ದು ಅರ್ಥಿಕ, ಸಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಸಬಲೀಕರಣ ಹೊಂದಲು ಅತೀ ಅಗತ್ಯ ಎಂದರು.
ವಿಶ್ವವಿದ್ಯಾಲಯಗಳ ಕೇಂದ್ರದಲ್ಲಿ ತಮ್ಮ ಶಿಕ್ಷಣ ಮುಂದುವರಿಸಲು ಪ್ರಯತ್ನಿಸಬೇಕು. ಮುಸ್ಲಿಂ ಯುವಕ ಯುವತಿಯರು ಡ್ರಾಪ್ ಔಟ್ ದತ್ತಾಂಶ ಸಿಗುತ್ತಿಲ್ಲ ಎಂಬ ಕಳವಳಕ್ಕೆ ಮುಖ್ಯ ಕಾರಣವೇನು ಎಂಬುದನ್ನು ಪ್ರಶ್ನಿಸಬೇಕಾಗಿದೆ.
ಸಮುದಾಯದಲ್ಲಿ ನಾಯಕತ್ವದ ಕೊರತೆಯಿದೆ. ನಮ್ಮ ಸಮಸ್ಯೆಗಳನ್ನು ಸಮರ್ಥವಾಗಿ ಮಂಡಿಸುವವರ ಕೊರತೆ ಇದೆ. ಅಬುಲ್ ಕಲಾಮ್ ಅಝಾದ್ ನಂತರ ಸಮುದಾಯ ಸಮರ್ಥ ನಾಯಕತ್ವ ಹೊಂದಲು ಸಾಧ್ಯವಾಗಿಲ್ಲ ಎಂಬುವುದು ಕಳವಳಕಾರಿ ಎಂದರು. ಮಹಿಳೆಯರ ಶಿಕ್ಷಣದ ಕುರಿತು ಸಮುದಾಯ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.
ಡಾ.ಅಬ್ದುಲ್ ಅಝೀಝ್ ಸೇರಿದಂತೆ ಹಲವು ಮಂದಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್.ಎ.ಓ ಕರ್ನಾಟಕದ ರಾಜ್ಯ ಕಾರ್ಯದರ್ಶಿ ನಾಸೀರ್ ಗುಜ್ಜರ್’ಬೆಟ್ಟು, ಜಮಾಅತರಲೆ ಇಸ್ಲಾಮಿ ಹಿಂದ್’ನ ಹೊಣೆಗಾರರಾದ ಅಬ್ದುಲ್ ಕಾದೀರ್ ಮೊಯ್ದಿನ್, ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿ ಜಿಲ್ಲಾಧ್ಯಕ್ಷರಾದ ನಬೀಲ್ ಗುಜ್ಜರ್’ಬೆಟ್ಟು, ಎಸ್.ಐ.ಓ ರಾಜ್ಯ ಕಾರ್ಯದರ್ಶಿ ಪೀರ್ ಲಟಗೇರಿ, ಉಡುಪಿ ಜಿಲ್ಲಾಧ್ಯಕ್ಷರಾದ ಆಯಾನ್ ಮಲ್ಪೆ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.