ಮಂಗಳೂರು: ಯೆಮೆನ್‌ನ ಹೆಚ್ಚಿನ ಭಾಗಗಳನ್ನು ನಿಯಂತ್ರಿಸುವ ಹೌತಿ ಬಂಡುಕೋರರು ಗಾಜಾಗೆ ಬೆಂಬಲ ಸೂಚಿಸಲು ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಗೋಡಂಬಿ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಿದೆ.
ದಕ್ಷಿಣ ಕನ್ನಡದಲ್ಲಿ ಸುಮಾರು 250 ಗೋಡಂಬಿ ಕೈಗಾರಿಕೆಗಳಿವೆ ಮತ್ತು ಜಿಲ್ಲೆಯು ವರ್ಷಕ್ಕೆ ಸುಮಾರು 5,800 ಟನ್ ಗೋಡಂಬಿಯನ್ನು ರಫ್ತು ಮಾಡುತ್ತದೆ. ವರ್ಷಕ್ಕೆ 2,45,000 ಟನ್ ಗೋಡಂಬಿಯನ್ನು ಜಿಲ್ಲೆ ಉತ್ಪಾದಿಸುತ್ತದೆ.
ಕರ್ನಾಟಕ ಗೋಡಂಬಿ ತಯಾರಕರ ಸಂಘದ(ಕೆಸಿಎಂಎ) ಮಾಜಿ ಅಧ್ಯಕ್ಷ ಹಾಗೂ ಮಂಗಳೂರು ಮೂಲದ ಕಲ್ಬಾವಿ ಕನ್ಸೂಮರ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಬ್ರೇಕ್-ಬಲ್ಕ್ ಕಚ್ಚಾ ಗೋಡಂಬಿ ಆಮದುದಾರರಲ್ಲಿ ಒಬ್ಬರಾದ ಕಲ್ಬಾವಿ ಪ್ರಕಾಶ್ ರಾವ್ ಅವರು, ಹೌತಿ ದಾಳಿ ನಂತರ ನಾವು ಆಫ್ರಿಕಾಗೆ ಗೋಡಂಬಿ ರಫ್ತು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಆದಾಗ್ಯೂ, ಕೆಂಪು ಸಮುದ್ರದ ಬಿಕ್ಕಟ್ಟಿನಿಂದಾಗಿ, ಹಡಗುಗಳು ಈಗ ಆಫ್ರಿಕಾದ ದಕ್ಷಿಣ ತುದಿಯಲ್ಲಿರುವ ಕೇಪ್ ಆಫ್ ಗುಡ್ ಹೋಪ್ ಮೂಲಕ ಸಂಚರಿಸುವಂತಾಗಿದೆ. ಇದರಿಂದ ಯುರೋಪ್ ಗೆ 6,300 ನಾಟಿಕಲ್ ಮೈಲುಗಳು ಮತ್ತು 15 ದಿನ ಹೆಚ್ಚುವರಿಯಾಗಿ ಹಡಗುಗಳು ಸಂಚರಿಸುತ್ತಿವೆ ಎಂದು ಅವರು ಹೇಳಿದ್ದಾರೆ.
“ಹಡಗುಗಳು ಬಳಸಿಕೊಂಡು ಹೋಗಬೇಕಾಗಿರುವುದರಿಂದ ದಕ್ಷಿಣ ಕನ್ನಡದಿಂದ ಗೋಡಂಬಿ ರಫ್ತುದಾರರು ಸಮುದ್ರದ ಸರಕು ಸಾಗಣೆಗೆ ಪ್ರತಿ ಕಂಟೇನರ್‌ಗೆ 2000 ಡಾಲರ್ ಹೆಚ್ಚು ನೀಡುತ್ತಿದ್ದಾರೆ ಮತ್ತು 19,000 ಕ್ಕೂ ಹೆಚ್ಚು ಹಡಗುಗಳು ಕೆಂಪು ಸಮುದ್ರದ ಸುರಕ್ಷಿತ ನೀರಿನಲ್ಲಿ ಸಿಲುಕಿಕೊಂಡಿವೆ. ಇದರಿಂದಾಗಿ ಸರಕು ಸಾಗಣೆಯಲ್ಲಿ ಭಾರಿ ವಿಳಂಬವಾಗಬಹುದು ಎಂದು ಅವರು ತಿಳಿಸಿದ್ದಾರೆ.