
ಬಿಜೆಪಿಯಲ್ಲಿ ಮತ್ತೆ ಅತೃಪ್ತಿಯ ಹೊಗೆ: ಎಲ್ಲರಿಗೆ ರಮೇಶ್ ಜಾರಕಿಹೊಳಿ ನೇತೃತ್ವ!
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿದೆ ಎಂಬುದು ಊಹೆ. ಇದೀಗ ಮತ್ತೆ ಅತೃಪ್ತಿಯ ಹೊಗೆ ಕಾಣಿಸಲಾರಂಭಿಸಿದ್ದು ಎಲ್ಲ ಅತೃಪ್ತ ಶಾಸಕರ ನೇತೃತ್ವವನ್ನು ರಮೇಶ್ ಜಾರಕಿಹೊಳಿ ವಹಿಸಿಕೊಂಡಿದ್ದಾರೆ.
ವಲಸಿಗ ಶಾಸಕರಾದ ಶ್ರೀಮಂತ ಪಾಟೀಲ, ಮಹೇಶ್ಕುಮಠಳ್ಳಿ, ವಿಧಾನ ಪರಿಷತ್ ಸದಸ್ಯರಾಜುಗೌಡ,ಅರವಿಂದ ಬೆಲ್ಲದ ಹಾಗೂ ಮಾಜಿ ಶಾಸಕ ಪ್ರತಾಪ ಗೌಡ ಪಾಟೀಲ್ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಗುರುವಾರ ತಡ ರಾತ್ರಿ ಸಭೆ ನಡೆಸಿದ್ದಾರೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾಗಿರುವ ತಮ್ಮನ್ನು ಸಚಿವ ಸಂಪುಟದಿಂದ ಹೊರಗಿಟ್ಟು ತಮಗೆ ಅನ್ಯಾಯ ಮಾಡಲಾಗಿದೆ ಎಂದು ವಲಸೆ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಬಿಎಸ್ವೈ ಸಂಪುಟದಲ್ಲಿದ್ದ ಶ್ರೀಮಂತ ಪಾಟೀಲ್ ಹಾಗೂ ಆರ್. ಶಂಕರ್ಗೆ ಮತ್ತು ಮಹೇಶ್ ಕುಮಠಳ್ಳಿಗೆ ಸಚಿವ ಸ್ಥಾನ ನೀಡದೇ ಇರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ ಎನ್ನಲಾಗಿದೆ.
ಇದೀಗ ತಮಗೆ ಸಚಿವ ಸ್ಥಾನ ನೀಡದಿದ್ದರೆ ಬಿಜೆಪಿಗೆ ರಾಜೀನಾಮೆ ನೀಡುವ ಬೆದರಿಕೆ ಒಡ್ಡುತ್ತಿದ್ದು, ತಮ್ಮಿಂದ ಸರಕಾರ ಅಸ್ತಿತ್ವಕ್ಕೆ ಬಂದರೂ ಬಿಜೆಪಿ ತಮ್ಮನ್ನು ಕಡೆಗಣಿಸಿದೆ ಎಂಬ ವಾದ ಅತೃಪ್ತ ಶಾಸಕರದ್ದು. ಇದೀಗ ಮುಖ್ಯಮಂತ್ರಿ ಬೊಮ್ಮಾಯಿ ಈ ಅತೃಪ್ತ ಶಾಸಕರ ಮನವೊಲಿಸುವಲ್ಲಿ ವಿಫಲವಾದರೆ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಬೆಳವಣಿಗೆಗಳು ರೂಪುಗೊಳ್ಳಲು ಹೆಚ್ಚು ಸಮಯವಿಲ್ಲ ಎಂಬುವುದು ರಾಜಕೀಯ ಪಡಸಾಲೆಯ ಲೆಕ್ಕಚಾರ!




