ಚುನಾವಣೆಗಳು ಹಿಂಸಾಚಾರಕ್ಕೆ ಪರವಾನಗಿಯಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಜು.8ರಂದು ನಡೆಯುವ ಪಂಚಾಯತಿ ಚುನಾವಣೆಗೆ ಕೇಂದ್ರ ಭದ್ರತಾ ಪಡೆಗಳನ್ನು ನಿಯೋಜಿಸುವುದನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಇದೇ ವೇಳೆ, ಚುನಾವಣೆಗಳು ಹಿಂಸಾಚಾರಕ್ಕೆ ಪರವಾನಗಿಯಲ್ಲ ಎಂದು ಅದು ಹೇಳಿದೆ.

ಕೋಲ್ಕತಾ ಹೈಕೋರ್ಟ್‌ ನೀಡಿರುವ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ. ಬಿ.ವಿ.ನಾಗರತ್ನ ಮತ್ತು ನ್ಯಾ. ಮನೋಜ್‌ ಮಿಶ್ರಾ ಅವರಿದ್ದ ರಜಾಕಾಲದ ನ್ಯಾಯಪೀಠ, ಒಂದೇ ದಿನದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುತ್ತಿರುವುದರಿಂದ ಅಂತಿಮವಾಗಿ ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಹೈಕೋರ್ಟ್‌ ಆದೇಶದ ಸಾರಾಂಶ ಎಂಬುವುದು ಸತ್ಯ ಎಂದು ಅಭಿಪ್ರಾಯಪಟ್ಟಿದೆ.

ಶಾಂತಿಯುತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಚುನಾವಣೆ ನಡೆಯುವ ಎಲ್ಲಾ ಜಿಲ್ಲೆಗಳಲ್ಲೂ ಕೇಂದ್ರ ಭದ್ರತಾ ಪಡೆ ಸಿಬ್ಬಂದಿಯನ್ನು ನಿಯೋಜಿಸುವಂತೆ ಪಶ್ಚಿಮ ಬಂಗಾಳ ಚುನಾವಣಾ ಆಯೋಗಕ್ಕೆ ಕಲ್ಕತಾ ಹೈಕೋರ್ಟ್‌ ಜೂ.15ರಂದು ಸೂಚನೆ ನೀಡಿತ್ತು.

Latest Indian news

Popular Stories