24 ಗಂಟೆಯೊಳಗೆ ರೋಹಿಣಿ ಸಿಂಧೂರಿ ವಿರುದ್ಧದ ಪೋಸ್ಟ್ ಡಿಲೀಟ್ ಮಾಡಿ: ಡಿ ರೂಪಾಗೆ ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ: ಹಿರಿಯ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧದ ಸಾಮಾಜಿಕ ಮಾಧ್ಯಮಗಳಲ್ಲಿನ ವಿವಾದಾತ್ಮಕ ಪೋಸ್ಟ್ ಗಳನ್ನು 24 ಗಂಟೆಯೊಳಗೆ ಡಿಲೀಟ್ ಮಾಡುವಂತೆ ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಅವರಿಗೆ ಸುಪ್ರೀಂಕೋರ್ಟ್ ಗುರುವಾರ ಸೂಚನೆ ನೀಡಿದೆ.

ರೋಹಿಣಿ ಸಿಂಧೂರಿ ಅವರು ತಮ್ಮ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಡಿ ರೂಪಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿಥಾಲ್ ಅವರ ಪೀಠ ಈ ನಿರ್ದೇಶನ ನೀಡಿದೆ.

ಎಲ್ಲಾ ಪೋಸ್ಟ್‌ ಅಳಿಸುವುದು ಅಸಾಧ್ಯವಾದರೆ, ಎಲ್ಲಾ ಕಾಮೆಂಟ್‌ಗಳನ್ನು, ಹೇಳಿಕೆ‌ಯನ್ನು ಹಿಂಪಡೆದಿದ್ದೇನೆ ಎಂಬ ಕನಿಷ್ಠ ಪೋಸ್ಟ್ ಅನ್ನು ಹಾಕಬೇಕೆಂದು ಸುಪ್ರೀಂಕೋರ್ಟ್ ಡಿ ರೂಪಾ ಅವರಿಗೆ ನಿರ್ದೇಶನ ನೀಡಿದೆ.

ಮಧ್ಯಸ್ಥಿಕೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಸುಪ್ರೀಂ ಸೂಚಿಸಿತ್ತು. ಹಾಗಾಗಿ ಇಬ್ಬರೂ ಅಧಿಕಾರಿಗಳು ಇಂದು ಸುಪ್ರೀಂಕೋರ್ಟ್‌ಗೆ ಖುದ್ದು ಹಾಜರಾಗಿದ್ದರು. ಆದರೆ ಮಧ್ಯಸ್ಥಿಕೆ ವಿಫಲವಾಗಿದೆ ಎಂದು ಕೋರ್ಟ್‌ಗೆ ತಿಳಿಸಲಾಗಿದೆ. ವಿವಾದ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಬೇಸರ ವ್ಯಕ್ತಪಡಿಸಿದೆ.

ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಹೀಗೆ ಜಗಳವಾಡಿದರೆ ಆಡಳಿತ ನಡೆಸುವುದು ಹೇಗೆ ಎಂದು ರೋಹಿಣಿ ಸಿಂಧೂರಿ, ಡಿ. ರೂಪಾ ಇಬ್ಬರನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಬಳಿಕ ಪೋಸ್ಟ್ ಡಿಲಿಟ್ ಮಾಡುವಂತೆ ರೂಪಾಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

Latest Indian news

Popular Stories