ಲೀಲಾಧರ ಶೆಟ್ಟಿ ದಂಪತಿಯ ಆತ್ಮಹತ್ಯೆ ಪ್ರಕರಣ- ಸಾಕು ಮಗಳಿಗಾಗಿ ಮುಂದುವರಿದ ಶೋಧ

ಕಾಪು: ಸಮಾಜರತ್ನ ಕೆ. ಲೀಲಾಧರ ಶೆಟ್ಟಿ (68) ಮತ್ತು ಅವರ ಪತ್ನಿ ವಸುಂಧರಾ ಎಲ್‌. ಶೆಟ್ಟಿ (59) ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅವರ ಸಾಕುಪುತ್ರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಸಾಕುಪುತ್ರಿ ಮನೆ ಬಿಟ್ಟು ಹೋದ ವಿಷಯಕ್ಕೆ ನೊಂದು ಈ ದಂಪತಿ ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಲೀಲಾಧರ ಶೆಟ್ಟಿ ದಂಪತಿಯ ಸಾಕು ಮಗಳು ಈ ಹಿಂದೆ ಮನೆ ಕೆಲಸಕ್ಕೆಂದು ಬಂದಿದ್ದಾತನೊಂದಿಗೆ ತೆರಳಿರುವ ಶಂಕೆ ವ್ಯಕ್ತ ಪಡಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಅದರಂತೆ ಆಕೆಯ ಪತ್ತೆಗಾಗಿ ಕಾಪು ಪೊಲೀಸರು ತನಿಖೆ ನಡೆಸುತ್ತಿದ್ದು, ಎರಡು ತಂಡಗಳನ್ನು ರಚಿಸಿದ್ದಾರೆ. ಜಿಲ್ಲೆ, ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಲ್ಲೂ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಡೆತ್‌ ನೋಟ್‌ನಲ್ಲಿ ಏನೇನಿತ್ತು ?
ಲೀಲಾಧರ ಶೆಟ್ಟಿ ಅವರು ಸಾವಿಗೆ ಮೊದಲು ಡೆತ್‌ ನೋಟ್‌ ಬರೆದಿಟ್ಟಿದ್ದು ಅದರ ವಿವರ ಅಧಿಕೃತವಾಗಿ ಬಹಿರಂಗವಾಗಿಲ್ಲ. “ನನ್ನನ್ನು ಕ್ಷಮಿಸಿ, ಪ್ರಾಣಕ್ಕಿಂತ ಮಾನ ಮುಖ್ಯ. ಯಾರ್ಯಾರಿಗೆ ಎಷ್ಟು ಸಾಲ ಕೊಡಬೇಕಿದೆ ಮತ್ತು ಅವರ ದೂರವಾಣಿ ಸಂಖ್ಯೆ ಇಲ್ಲಿದೆ. ಎಲ್‌ಐಸಿ ಕಮೀಷನ್‌ನಿಂದ ಬರುವ ಹಣದಲ್ಲಿ ಸಂದಾಯ ಮಾಡಿ. ತಾನು ಕಲಿತ ಕರಂದಾಡಿ ಶಾಲೆಯನ್ನು ಅಭಿವೃದ್ಧಿ ಪಡಿಸಿ, ಅಲ್ಲಿನ ಮಕ್ಕಳ ಬಗ್ಗೆ ಪ್ರೀತಿ ತೋರಿ. ಬಾಕಿ ಇರುವ ಊರಿನ ವಿವಿಧ ಅಭಿವೃದ್ಧಿ ಕೆಲಸಗಳನ್ನು ಶೀಘ್ರ ಮುಗಿಸಿ’ ಎಂದು ಪತ್ರದಲ್ಲಿ ಬರೆದಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.

ಸಾಕು ಮಗಳೂ ಪತ್ರ ಬರೆದಿದ್ದಳೇ?
ಇದೇ ವೇಳೆ ಸಾಕು ಮಗಳು ಕೂಡ ಮನೆ ಬಿಟ್ಟು ತೆರಳುವ ವೇಳೆ ಪತ್ರ ಬರೆದಿಟ್ಟಿದ್ದಾಳೆಂದು ಮೂಲಗಳಿಂದ ತಿಳಿದು ಬಂದಿದ್ದು ಆ ಪತ್ರದಲ್ಲೇನಿತ್ತು?, ಆ ಪತ್ರ ನೋಡಿದ ಬಳಿಕ ಲೀಲಾಧರ ಶೆಟ್ಟಿ ದಂಪತಿ ಸಾಯುವ ನಿರ್ಧಾರಕ್ಕೆ ಬಂದರೇ? ಅಥವಾ ಮೊದಲೇ ಈ ನಿರ್ಧಾರ ತೆಗೆದು ಕೊಂಡಿದ್ದರೇ ಇತ್ಯಾದಿ ಪ್ರಶ್ನೆಗಳಿಗೆ ತನಿಖೆಯ ಬಳಿಕವೇ ಉತ್ತರ ದೊರಕಬೇಕಿದೆ.

Latest Indian news

Popular Stories