ಮಂಗಳೂರು, ಸೆ.4: ಸುರತ್ಕಲ್ ಸಮೀಪದ ಕಾಳವಾರು ಎಂಬಲ್ಲಿ ಯುವಕನೊಬ್ಬನನ್ನು ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಳವಾರು ನಿವಾಸಿಗಳಾದ ಪ್ರಶಾಂತ್ (28), ಧನರಾಜ್ (23) ಮತ್ತು ಯಜ್ಞೇಶ್ (22) ಎಂದು ಗುರುತಿಸಲಾಗಿದೆ.
ಅಬ್ದುಲ್ ಸಫ್ವಾನ್ ಭಾನುವಾರ ರಾತ್ರಿ 7.30ರ ಸುಮಾರಿಗೆ ತನ್ನ ಸ್ನೇಹಿತ ಮೊಹಮ್ಮದ್ ಸಫ್ವಾನ್ ಜೊತೆ ಪಿಲಿಯನ್ ರೈಡರ್ ಆಗಿ ಕಾಳವಾರ ಗೆಳೆಯರ ಬಳಗ ಬಸ್ ನಿಲ್ದಾಣದ ಬಳಿ ಬೈಕ್ ನಲ್ಲಿ ಹೋಗುತ್ತಿದ್ದರು. ಆರೋಪಿ ಪ್ರಶಾಂತ್ ಮತ್ತು ಧನರಾಜ್ ಎಂಬುವರು ಅಬ್ದುಲ್‌ನನ್ನು ನಿಂದಿಸಿ ಧನರಾಜ್ ಅಬ್ದುಲ್ ಮೇಲೆ ಕಠಾರಿಯಿಂದ ಹಲ್ಲೆ ನಡೆಸಿದ್ದು, ಮತ್ತೊಬ್ಬ ಆರೋಪಿ ಗಣೇಶ್ ಚಾಕುವಿನಿಂದ ಅಬ್ದುಲ್ ಕೈಗೆ ಇರಿದಿದ್ದಾನೆ. ಮತ್ತೊಬ್ಬ ಆರೋಪಿ ಯಜ್ಞೇಶ್ ಅಬ್ದುಲ್ ಬೆನ್ನಿಗೆ ಚಾಕುವಿನಿಂದ ಇರಿದಿದ್ದಾನೆ.
ಅಬ್ದುಲ್ ನನ್ನು ರಕ್ಷಿಸಲು ಮೊಹಮ್ಮದ್ ಸಫ್ವಾನ್ ಮಧ್ಯಪ್ರವೇಶಿಸಲು ಮುಂದಾದಾಗ, ಪುನಿತ್, ಬಬ್ಬು, ಗಣೇಶ್, ಪ್ರದೀಪ್ ಮತ್ತು ಇತರರು ಹೊಡೆದು ತಡೆದರು. ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿರುವುದನ್ನು ಕಂಡ ಆರೋಪಿಗಳು ಅಬ್ದುಲ್‌ಗೆ ಬೆದರಿಸಿ ಸ್ಥಳದಿಂದ ತೆರಳಿದ್ದಾರೆ.
ಈ ಸಂಬಂಧ ಆರೋಪಿಗಳಾದ ಪ್ರಶಾಂತ್, ಧನರಾಜ್ ಮತ್ತು ಯಜ್ಞೇಶ್ ಮೇಲೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.