ಈಗ ಅಧಿಕೃತ: ದೆಹಲಿ G20 ಗೆ ಕ್ಸಿ ಜಿನ್‌ಪಿಂಗ್ ಗೈರು: ಚೀನಾ ಸರ್ಕಾರ ಮಾಹಿತಿ

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಈ ವಾರ ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಮತ್ತು ಚೀನಾ ನಿಯೋಗದ ನೇತೃತ್ವವನ್ನು ಪ್ರಧಾನಿ ಲಿ ಕಿಯಾಂಗ್ ನೇತೃತ್ವ ವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ವಿದೇಶಾಂಗ ಸಚಿವಾಲಯ ಸೋಮವಾರ ಬೀಜಿಂಗ್‌ನಲ್ಲಿ ಪ್ರಕಟಣೆ ನೀಡಿದ್ದು, ಭಾರತ ಗಣರಾಜ್ಯದ ಸರ್ಕಾರದ ಆಹ್ವಾನದ ಮೇರೆಗೆ, ಸ್ಟೇಟ್ ಕೌನ್ಸಿಲ್‌ನ ಪ್ರಧಾನ ಮಂತ್ರಿ ಲಿ ಕಿಯಾಂಗ್ ಅವರು ಸೆಪ್ಟೆಂಬರ್ 9 ಮತ್ತು 10 ರಂದು ಭಾರತದ ದೆಹಲಿಯಲ್ಲಿ ನಡೆಯಲಿರುವ 18ನೇ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತದ ಅರುಣಾಚಲಪ್ರದೇಶ ಮತ್ತು ಅಕ್ಸಾಯ್‌ ಚಿನ್‌ ಪ್ರದೇಶಗಳನ್ನು ತನ್ನ ಗಡಿಯೊಳಗೆ ಹಾಕಿ ನಕ್ಷೆ ಬಿಡುಗಡೆ ಮಾಡಿದ್ದ ಚೀನಾ ಇದೀಗ ಭಾರತದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ತನ್ನ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಗೈರಾಗುತ್ತಿದ್ದಾರೆ. ಶೃಂಗಸಭೆ ಸಂದರ್ಭದಲ್ಲಿಯೇ ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರೊಂದಿಗೆ ಜಿನ್‌ಪಿಂಗ್‌ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಜಿನ್ ಪಿಂಗ್ ಅನುಪಸ್ಥಿತಿಯಲ್ಲೇ ಭಾರತ-ಚೀನಾ ನಡುವೆ ಅನೌಪಚಾರಿಕ ದ್ವಿಪಕ್ಷೀಯ ಮಾತುತೆ ನಡೆಯಲಿದೆ ಎಂದು ಹೇಳಲಾಗಿದೆ.

ಈಗಾಗಲೇ ಪ್ರಧಾನಿ ಮೋದಿ ಅವರಿಗೆ ಸೋಮವಾರ ಕರೆ ಮಾಡಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಸಭೆಯಲ್ಲಿ ತಾವು ಪಾಲ್ಗೊಳ್ಳದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು ಕೂಡ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನಲಾಗಿದೆ. 

Latest Indian news

Popular Stories