ಸುರತ್ಕಲ್: ಹಲವು ಹೋರಾಟದ ನಂತರ ಸುರತ್ಕಲ್ ಟೋಲ್’ಗೇಟ್ ಸಂಗ್ರಹ ನಿಂತಿತ್ತು. ಇದೀಗ ಮತ್ತೆ ಟೋಲ್’ಗೇಟ್ ಬಳಿ ಕಾಮಗಾರಿ ನಡೆಯುತ್ತಿದ್ದು ಮತ್ತೆ ಟೋಲ್ ಸಂಗ್ರಹ ಮಾಡುವರೇ ಎಂಬ ಸಂಶಯ ಎಡೆ ಮಾಡಿಕೊಟ್ಟಿದೆ. ಈ ಕುರಿತು ಉದಯವಾಣಿ ಪತ್ರಿಕೆ ಕೂಡ ವಿಸ್ತೃತ ವರದಿ ಪ್ರಕಟಿಸಿದೆ.
ಯಾಕೆಂದರೆ ಹಲವು ವರ್ಷಗಳ ಸಾರ್ವಜನಿಕರ ಹೋರಾಟದ ಫಲವಾಗಿ ಸ್ಥಗಿತಗೊಂಡಿದ್ದ ಟೋಲ್ ಪ್ಲಾಜಾಕ್ಕೆ ಜೀವ ತುಂಬುವ ಕೆಲಸವಾಗುತ್ತಿದೆ. ಅದರ ಹಳೆಯ ಅವಶೇಷಗಳನ್ನು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅದರ ನವೀಕರಣಕ್ಕೆ ಮುಂದಾಗಿದೆ. ಈ ಬೆಳವಣಿಗೆ ಮತ್ತೆ ಸುಂಕ ವಸೂಲಿಯ ಸಂಶಯವನ್ನು ನಾಗರಿಕರಲ್ಲಿ ಸೃಷ್ಟಿಸಿದೆ. ಜತೆಗೆ ಇನ್ನೂ ಇಲ್ಲಿನ ಟೋಲ್ ಪ್ಲಾಜಾವನ್ನು ಹೆಜಮಾಡಿ ಟೋಲ್ ಪ್ಲಾಜಾದೊಂದಿಗೆ ಇನ್ನೂ ವಿಲೀನಗೊಳಿಸದಿರುವುದು ಈ ಸಂಶಯಕ್ಕೆ ಪುಷ್ಟಿ ನೀಡಿದೆ.
ಟೋಲ್‌ಗೇಟ್‌ಗಳ ನಡುವೆ ಕನಿಷ್ಠ 60 ಕಿ.ಮೀ. ಅಂತರ ಇರಬೇಕೆಂಬ ನಿಯಮವಿದ್ದರೂ ಸುರತ್ಕಲ್-ಹೆಜಮಾಡಿ ಮಧ್ಯೆ ಕೇವಲ 11 ಕಿ.ಮೀ. ಅಂತರದಲ್ಲಿ ಟೋಲ್‌ಗೇಟ್ ನಿರ್ಮಿಸಿ ಸುಂಕ ವಸೂಲಿ ಮಾಡಲಾಗುತ್ತಿತ್ತು. ಇದಕ್ಕೆ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿ ಹಲವು ವರ್ಷಗಳಿಂದ ಪ್ರತಿಭಟನೆ ಮಾರ್ಗ ಹಿಡಿದ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ಇಲ್ಲಿ ಶುಲ್ಕ ಸಂಗ್ರಹವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿತ್ತು. ಆದರೆ ಇದನ್ನು ಅಧಿಕೃತವಾಗಿ ಹೆಜಮಾಡಿ ಪ್ಲಾಜಾದ ಜತೆಗೆ ವಿಲೀನವಾಗಿದೆ ಎಂದು ಇನ್ನೂ ಘೋಷಿಸಿಲ್ಲ.
ಶಿಥಿಲವಾಗಿದ್ದ ಕೇಂದ್ರ
ಎಂಟು ತಿಂಗಳಿಂದೀಚೆಗೆ ಕೇಂದ್ರವು ನಿರ್ವಹಣೆಯಿಲ್ಲದೆ ಶಿಥಿಲವಾಗಿತ್ತು. ರಸ್ತೆಯಲ್ಲಿ ಹೊಂಡಗಳು ಸೃಷ್ಟಿಯಾಗಿ ಹಲವು ಅಪಘಾತಗಳಿಗೂ ಕಾರಣವಾಗಿತ್ತು. ಶಿಥಿಲ ಟೋಲ್ ಪ್ಲಾಜಾದ ಅವಶೇಷಗಳು ಕುಸಿದು ಅವಘಡ ಸಂಭವಿಸುವ ಸಾಧ್ಯತೆಯೂ ಇತ್ತು. ಹಾಗಾಗಿ ತೆರವುಗೊಳಿಸುವಂತೆ ನಾಗರಿಕರ ಆಗ್ರಹವೂ ಕೇಳಿಬಂದಿತ್ತು. ಆದರೆ ಈಗ ಕೇಂದ್ರವನ್ನು ತೆರವುಗೊಳಿಸುವ ಬದಲು ಭರದಿಂದ ದುರಸ್ತಿಗೊಳಿಸಲಾಗುತ್ತಿದೆ. ವಾಹನಗಳು ಗುದ್ದಿ ಮುರಿದು ಬಿದ್ದಿದ್ದ ಕಂಬ, ಶಿಥಿಲ ಛಾವಣಿಯನ್ನು ನೇರ್ಪುಗೊಳಿಸಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾ ಗಿದೆ.
ಅನುಮಾನವೇಕೆ?
ಎನ್‌ಐಟಿಕೆ ಬಳಿಕದ ಹೆದ್ದಾರಿ ಬಿಒಟಿ ವ್ಯವಸ್ಥೆಯದ್ದಾಗಿದ್ದರೆ, ಇತ್ತ ಬಂಟ್ವಾಳ, ಸುರತ್ಕಲ್ ರಸ್ತೆಯನ್ನು ನ್ಯೂ ಮಂಗಳೂರು ಪೋರ್ಟ್ ರೋಡ್ ಲಿ. ಹೆಸರಿನಡಿ ಇರ್ಕಾನ್ ಸಂಸ್ಥೆಯು ಒಟ್ಟು 360 ಕೋಟಿ ರೂ. ವ್ಯಯಿಸಿ ನಿರ್ಮಿಸಿತ್ತು. ಎಂಟು ತಿಂಗಳಿನಿಂದ ಶುಲ್ಕ ಸಂಗ್ರಹವಿಲ್ಲ. ಅಲ್ಲದೆ ಈ ಭಾಗದಲ್ಲಿ ಹೆದ್ದಾರಿ ನಿರ್ವಹಣೆಯ ಮೂರು ವರ್ಷದ ಗುತ್ತಿಗೆಯು ಈ ವರ್ಷಕ್ಕೆ ಅಂತ್ಯಗೊಳ್ಳುತ್ತಿದೆ. ಮುಂದೆ ಗುತ್ತಿಗೆ ವಹಿಸಿಕೊಳ್ಳುವವರು ಗುಂಡಿಗಳನ್ನು ಮುಚ್ಚುವುದೂ ಸೇರಿದಂತೆ ರಸ್ತೆಯನ್ನು ನಿರ್ವಹಿಸಬೇಕಿದೆ. ಈ ನಡುವೆ ಕೂಳೂರಿನಲ್ಲಿ 66 ಕೋಟಿ ರೂ. ವೆಚ್ಚದ ಸೇತುವೆ, ಕೆಪಿಟಿ ಬಳಿ 24 ಕೋಟಿ ರೂ. ವೆಚ್ಚದ ಮೇಲ್ಸೇತುವೆ ನಿರ್ಮಾಣವಾಗಲಿದ್ದು ಎಲ್ಲವೂ ಪೂರ್ಣಗೊಂಡ ಬಳಿಕ ನಿರ್ವಹಣೆಯ ರೂಪುರೇಷೆ ನಿರ್ಧಾರವಾಗಲಿದೆ. ಇದೇ ವೇಳೆ ಟೋಲ್ ಕೇಂದ್ರದ ಸುತ್ತಮುತ್ತ ಶಾಶ್ವತ ಕಾಮಗಾರಿ ನಡೆಯುತ್ತಿರುವುದು ವಾಹನ ಸವಾರರಲ್ಲಿ ಅನುಮಾನ ಸೃಷ್ಟಿಸಿದೆ.
ಇದೇ ಸಂದರ್ಭದಲ್ಲಿ ಟೋಲ್ ಹೋರಾಟ ಸಮಿತಿಯವರು “ಯಾವುದೇ ಕಾರಣಕ್ಕೂ ಟೋಲ್ ಮತ್ತೆ ಸಂಗ್ರಹಿಸಲು ಅವಕಾಶ ಕೊಡುವುದಿಲ್ಲ’ ಎಂದು ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ಸಾರ್ವಜನಿಕರ ಎದುರು ತಮ್ಮ ಮುಂದಿನ ಕಾರ್ಯಯೋಜನೆಯನ್ನು ವಿವರಿಸಬೇಕಿದೆ.
ಸುರತ್ಕಲ್‌ನ ಟೋಲ್ ಪ್ಲಾಜಾವನ್ನು ಹೆಜಮಾಡಿಯ ಪ್ಲಾಜಾದೊಂದಿಗೆ ವಿಲೀನಗೊಳಿಸಲು ರಾಜ್ಯ ಸರಕಾರದ ಸಹಕಾರ ಅಗತ್ಯವಿದೆ. ಸೂಕ್ತ ನಿರ್ಧಾರಕ್ಕೆ ಬರುವವರೆಗೆ ಸುರತ್ಕಲ್ ಟೋಲ್ ಕೇಂದ್ರವನ್ನು ಯಥಾಸ್ಥಿತಿಯಲ್ಲಿ ಇರಿಸಿಕೊಳ್ಳಲು ದುರಸ್ತಿ ಮಾಡಿದ್ದೇವೆ. ವಿಲೀನದ ಅನುಮತಿಗಾಗಿ ಕಾಯುತ್ತಿದ್ದೇವೆ.
– ಅಬ್ದುಲ್ ಜಾವೇದ್, ಯೋಜನ ನಿರ್ದೇಶಕರು, ರಾ.ಹೆ. ಪ್ರಾಧಿಕಾರ