ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು: ಸಿ.ಟಿ.ರವಿ

ವಿಜಯಪುರ : ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು, ಅಂದರೆ ಬಾಂಬ್ ಹಾಕಿ ಎಂದಲ್ಲ, ಅವರಿಗೆ ದೇಶದ ಪರಿಸ್ಥಿತಿ, ದೇಶದ ಸುರಕ್ಷತೆ ಬಗ್ಗೆ ತಿಳಿ ಹೇಳಿ ಅವರಲ್ಲಿರುವ ದೇಶಭಕ್ತರನ್ನು ಕಾಂಗ್ರೆಸ್ ತೊರೆಯುವಂತೆ ಮಾಡುವ ಕಾರ್ಯವೇ ಸರ್ಜಿಕಲ್ ಸ್ಟ್ರೈಕ್ ಎಂದು ಮಾಜಿ ಸಚಿವ ಸಿ.ಟಿ. ರವಿ ಗುಡುಗಿದರು.

ವಿಜಯಪುರದ ಹೈಸ್ಕೂಲ್ ಮೈದಾನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಬೃಹತ್ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮನೆ-ಮನೆಗೆ ಹೋಗಿ ಅವರಿಗೆ ದೇಶದ ಪರಿಸ್ಥಿತಿ ಮನವರಿಕೆ ಮಾಡಿಕೊಡಬೇಕು, ದೇಶದ ಸುರಕ್ಷತೆಗೆ ಮೋದಿಜಿಯವರಂತಹ ನಾಯಕರು ಅವಶ್ಯಕ, ಹೀಗಾಗಿ ದೇಶ ಉಳಿಸುವುದಕ್ಕಾಗಿ ಬಿಜೆಪಿ ಮತ ಹಾಕಿ, ಯಾರು ದೇಶಭಕ್ತರೋ ಅವರು ಕಾಂಗ್ರೆಸ್ ತೊರೆದು ಬರುವಂತೆ ಆಂದೋಲನ ಮಾಡಬೇಕು ಎಂದು ಕರೆ ನೀಡಿದರು.

ಈ ಹಿಂದೆ ನಮ್ಮ ಗೆಳೆಯ ಲಕ್ಷ್ಮಣ ಸವದಿ ನಮ್ಮ ಜೊತೆಗಿದ್ದರು, ಭಾರತ ಮಾತಾ ಕೀ ಜೈ ಎಂದು ಯಾವಾಗ ಬೇಕಾದರೂ ಹೇಳಬಹುದಿತ್ತು, ಆದರೆ ಕಾಂಗ್ರೆಸ್ನಲ್ಲಿ ಭಾರತ ಮಾತಾ ಕೀ ಜೈ ಎನ್ನಲು ಪರ್ಮಿಷನ್ ತೆಗೆದುಕೊಳ್ಳಬೇಕು, ಆದರೆ ಪಾಕ್ಗೆ ಜಯ ಎಂದು ಹೇಳಲು ಕಾಂಗ್ರೆಸ್ನಲ್ಲಿ ಪರ್ಮಿಷನ್ ತೆಗೆದುಕೊಳ್ಳಬೇಕಿಲ್ಲ ಎಂದು ಸಿ.ಟಿ. ರವಿ ವ್ಯಂಗ್ಯವಾಡಿದರು.

ದೇಶಕ್ಕೆ ಶ್ರೇಷ್ಠ ಸಂವಿಧಾನ ಕರುಣಿಸಿದ ಡಾ.ಬಾಬಾಸಾಹೇಬ ಅಂಬೇಡ್ಕರ ಅವರೇ ಕಾಂಗ್ರೆಸ್ ಒಂದು ಸುಟ್ಟ ಮನೆ, ಅದರ ಸನಿಹಕ್ಕೂ ಹೋದರೂ ಭಸ್ಮವಾಗುತ್ತೀರಿ ಎಂದು ಅಂದೇ ಎಚ್ಚರಿಕೆ ನೀಡಿದ್ದರು. ಕಾಂಗ್ರೆಸ್ ಪಕ್ಷ ಡಾ.ಬಿ.ಆರ್. ಅಂಬೇಡ್ಕರ ಅವರ ವಿರುದ್ಧ ಚುನಾವಣೆಗೆ ನಿಂತ ಪಕ್ಷ, ಅವರಿಗೆ ದೊಡ್ಡ ಅಪಮಾನ, ಅನ್ಯಾಯ ಮಾಡಿದ ಪಕ್ಷ ಏನಾದರೂ ಇದ್ದರೆ ಅದು ಕಾಂಗ್ರೆಸ್ ಎಂದು ಕಿಡಿಕಾರಿದರು

ಜನತಾ ದಳ ಜೊತೆ ಬಿಜೆಪಿಯ ಸಂಬಂಧ ಹೊಸತಲ್ಲ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜನತಾ ಪರಿವಾರಕ್ಕೆ ಬಿಜೆಪಿ ಸಾಥ್ ನೀಡಿತ್ತು. ದಿ. ರಾಮಕೃಷ್ಣ ಹೆಗಡೆ ಅವರಿಗೆ 18 ಶಾಸಕರ ಬೆಂಬಲ ನೀಡಿದ್ದೂ ಸಹ ಬಿಜೆಪಿಯೇ, ಈ ಹಿಂದೆ 20-20 ಸರ್ಕಾರದಲ್ಲಿಯೂ ಮೊದಲನೇ 20 ಓವರ್ ಆಡಲು ಸಹ ಜೆಡಿಎಸ್ನವರಿಗೆ ಬಿಡಲಾಗಿತ್ತು, ನಮ್ಮ ಕಡೆಯಿಂದ ಅವರಿಗೆ ಯಾವ ರೀತಿಯಲ್ಲೂ ಮೋಸಲಾಗಿಲ್ಲ ಎಂದರು.

ಗಂಡು ಗೊತ್ತು ಮಾಡದೇ ಹೆಣ್ಣು ಕೊಡಿ ಎಂದು ಕೇಳುವಂತಹ ಪರಿಸ್ಥಿತಿ ಕಾಂಗ್ರೆಸ್ನಲ್ಲಿದೆ, ರಾಹುಲ್ ಮದುವೆ ಗಂಡು ಎಂದರೆ ಯಾರೂ ಹೆಣ್ಣು ಕೊಡುವುದಿಲ್ಲ ಎಂಬ ಅಂಜಿಕೆ ಬೇರೆ ಇದೆ, ನಮ್ಮ ಗಂಡು ಅಂತೂ ಸಿದ್ಧವಾಗಿದ್ದಾರೆ, ನಮ್ಮ ಗಂಡು ಯಾವ ರೀತಿ ಎಂದರೆ ಜಗ ಮೆಚ್ಚಿದ ಗಂಡು, 140 ಕೋಟಿ ಜನರಿಗೆ ಒಂದೇ ಒಂದು ರೂ. ಇಲ್ಲದೇ ಕೋವಿಡ್ ವ್ಯಾಕ್ಸಿನ್ ನೀಡಿದ ಭಗವಂತ ರೂಪದ ಗಂಡು, ಗರೀಬ್ ಕಲ್ಯಾಣ ಯೋಜನೆ ಮೂಲಕ ಅಕ್ಕಿ ಕೊಡುವ ಗಂಡು ನಮ್ಮ ಮೋದಿಜಿ ಎಂದರು.

ಆಕಾಶ, ಭೂಮಿ, ಪಾತಾಳದಲ್ಲಿ ಹಗರಣವೋ ಹಗರಣ ಮಾಡಿ ಲೂಟಿ ಹೊಡೆದವರು ಮತ್ತೆ ಲೂಟಿ ಮಾಡಲು ಅವಕಾಶ ಕೇಳುತ್ತಿದ್ದಾರೆ, ಹೈದರಾಬಾದ್, ದೆಹಲಿ, ಶ್ರೀನಗರ ಬಾಂಬ್ ಸ್ಪೋಟ ಎಂಬ ಸುದ್ದಿ ಕೇಳಿ ಬರುತ್ತಿತ್ತು, ಈಗ ಈ ಎಲ್ಲವೂಗಳಿಗೆ ಮಟ್ಟ ಹಾಕಲಾಗಿದೆ, ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಹಾಕಲು ಯೋಜಿಸಿದವರನ್ನು, ಡಿಜೆಹಳ್ಳಿ-ಕೆಜಿಹಳ್ಳಿ ಘಟನೆಗೆ ಕಾರಣರಾದವರನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬ್ರದರ್ಸ್ ಎಂದು ಕರೆದವರು, ಹೀಗಾಗಿ ಈ ರೀತಿಯ ವ್ಯವಸ್ಥೆ ಇರಬಾರದು, ಈ ರೀತಿಯ ದುರುಳರಿಗೆ ಶಿಕ್ಷೆ ನೀಡಲು ಬುಲ್ಡೋಜರ್ ಆಡಳಿತ ಬೇಕು ಎಂದರು.

ಪ್ರಸ್ತುತ ಲೋಕಸಭಾ ಚುನಾವಣೆ ಜಾತಿ ಮೇಲೆ ಅಲ್ಲ ನೀತಿ ಮೇಲೆ ನಡೆಯುವ ಚುನಾವಣೆ, ನಮ್ಮ ದೇಶಕ್ಕೆ ಯಾರು ಬೇಕು ಎನ್ನುವುದನ್ನು ಚಿಂತನೆ ಮಾಡುವ ಚುನಾವಣೆ, ನಮ್ಮ ದೇಶ ಯಾರು ಉಳಿಸುತ್ತಾರೋ ಎನ್ನುವುದನ್ನು ನೋಡಿ ವೋಟು ಹಾಕಬೇಕು. ಕೋವಿಡ್ ಕಾಲಘಟ್ಟದಲ್ಲಿ ವ್ಯಾಕ್ಸೀನ್ ನೀಡಿದ ಮೋದಿ ಅವರ ಋಣವನ್ನು ತೀರಿಸುವ ಸಮಯ ಬಂದಿದೆ ಎಂದರು. ಜೇಬಿಗೆ ಕೈ ಹಾಕದೇ ಜೇಬು ಹೊಡೆಯುವುದು ಹೇಗೆ ಎಂಬುದನ್ನು ಕಾಂಗ್ರೆಸ್ ನೋಡಿ ಕಲಿಯಬೇಕು, ಹಗಲು ದರೋಡೆ, ಬೆಲೆ ಏರಿಕೆ ಮಾತ್ರ ಕಾಂಗ್ರೆಸ್ ಸಾಧನೆ ಎಂದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಕೂಡಗಿ ಎನ್ಟಿಪಿಸಿ, ರೈಲ್ವೇ ಮೇಲ್ಸೆತುವೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ, ಆದರೂ ಸಹ ಗೋಳಗುಮ್ಮಟ, ಉಪಲಿ ಬುರುಜ್ ಕಟ್ಟಿದ್ದೇನೆ ಎಂದು ಹೇಳಿಲ್ಲ, 11 ಚುನಾವಣೆ ಗೆಲ್ಲಿಸಿದ್ದು ನನ್ನ ಪುಣ್ಯ, ನಾನು ಎಂದಿಗೂ ಜಾತಿ ಮಾಡಲಿಲ್ಲ, ನಾನು ಯಾವ ಜಾತಿ ವಿರೋಧಿಯಲ್ಲ, ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಸ್ವಭಾವ ನನ್ನದು, ಮೋದಿ ಅವರು ಮೂರನೇಯ ಬಾರಿ ಪ್ರಧಾನಿಯಾಗಲು ನಾನು ಸಂಸತ್ನಲ್ಲಿ ಕೈ ಎತ್ತಬೇಕು ಎಂಬುದು ನನ್ನ ಆಸೆ, ಈ ಆಸೆ ಈಡೇರಿಸಿ ಎಂದು ಅಂಗಲಾಚಿ ಬೇಡಿಕೊಳ್ಳುವೆ ಎಂದರು.

ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳಿಗೆ ವಾರ್ಷಿಕ 10 ಸಾವಿರ ಕೋಟಿ ರೂ. ನೀಡುವುದಾಗಿ ಸುಳ್ಳು ಭರವಸೆ ನೀಡುವ ಮೂಲಕ ಕಾಂಗ್ರೆಸ್ ಉತ್ತರ ಕರ್ನಾಟಕ ಭಾಗಕ್ಕೆ ದೊಡ್ಡ ಮೋಸ ಮಾಡಿದೆ ಎಂದರು.
ಜೆಡಿಎಸ್ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಜೆಡಿಎಸ್, ಬಿಜೆಪಿ ಬೇರೆ ಅಲ್ಲವೇ ಅಲ್ಲ, ಈ ಮನೋಭಾವವನ್ನು ಕಾರ್ಯಕರ್ತರು ಬೆಳೆಸಿಕೊಳ್ಳಬೇಕು, ಈ ಹಿಂದಿನ ಚುನಾವಣೆಯಲ್ಲಿ ಅನೇಕ ಕ್ಷೇತ್ರಗಳಲ್ಲಿ ನಾವು ಬಿಜೆಪಿ ವಿರುದ್ದ ಗೆದ್ದಿರಬಹುದು, ಈಗ ಪರಿಸ್ಥಿತಿ ಬದಲಾಗಿದೆ, ಹೀಗಾಗಿ ಕಾರ್ಯಕರ್ತರು ಅನ್ಯಥಾ ಭಾವಿಸದೇ ಎಲ್ಲರೂ ಒಂದಾಗಿ ಚುನಾವಣೆ ಎದುರಿಸಬೇಕು, ಇವತ್ತಿನ ಬಿರುಬಿಸಿಲಿನಲ್ಲಿಯೂ ಕಾರ್ಯಕರ್ತರ ಉತ್ಸಾಹ ನೋಡಿದರೆ ಇಂದೇ ಜಿಗಜಿಣಗಿ ಸಾಹೇಬರ ಗೆಲುವುದಾಗಿದೆ ಎಂದರು.

ನಡಹಳ್ಳಿ ಎಚ್ಚರಿಕೆ ಗಂಟೆ:
ಮುದ್ದೇಬಿಹಾಳ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ಒಂದೇಒಂದು ಭಿನ್ನಾಭಿಪ್ರಾಯ ಸಹ ಜೆಡಿಎಸ್, ಬಿಜೆಪಿ ನಡುವೆ ಇಲ್ಲ, ಅಜಾತಶತ್ರು ಆಗಿರುವ ರಮೇಶ ಜಿಗಜಿಣಗಿ ಅವರ ಗೆಲುವಿನ ಸಂಕಲ್ಪ ಮಾಡಬೇಕು, ಮೋದಿ ಅವರ ಹೆಸರಿನಲ್ಲಿ ಮತ ಬಂದೇ ಬರುತ್ತವೆ ಎಂದು ಅತಿಯಾದ ಆತ್ಮವಿಶ್ವಾಸದಿಂದ ಸುಮ್ಮನೆ ಕೂರುವುದು ಸಲ್ಲ, ಮೋದಿಜಿ ಅವರು ಜನಪ್ರಿಯ ನಾಯಕರು, ರಮೇಶ ಜಿಗಜಿಣಗಿ ಅವರು ಅಜಾತಶತ್ರು ಎನ್ನುವುದರಲ್ಲಿ ಎರಡು ಮಾತಿಲ್ಲ,ಆದರೆ ಇದೇ ನೆಪದಲ್ಲಿ ಮನೆ ಮನೆಗೆ ಹೋಗಿ ವೋಟು ಕೇಳದೇ ಹೋದರೆ, ಕೇಂದ್ರ ಸರ್ಕಾರದ ಸಾಧನೆ ಹೇಳದೇ ಹೋದರೆ ಚುನಾವಣೆ ಗೆಲ್ಲುವುದು ಕಷ್ಟವಾಗಬಹುದು ಎಂದು ಎಚ್ಚರಿಕೆ ನೀಡಿದರು.

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ನಮ್ಮದು ಜಿಗಜಿಣಗಿ ಅವರದ್ದು ಜಗಳ ಇದೆ ಎಂದು ಚುನಾವಣೆ ಮಾಡದೇ ಹೋದರೆ ಬಿಜೆಪಿ ಹಾಗೂ ನರೇಂದ್ರ ಮೋದಿ ಅವರಿಗೆ ದ್ರೋಹ ಮಾಡಿದಂತೆ, ಈಗ ನಿಷ್ಠಾವಂತ ಕಾರ್ಯಕರ್ತರ ಕಾಲ ಬಿಜೆಪಿಯಲ್ಲಿದೆ. ಇನ್ನೂ ಎರಡು ದಿನ ಇರುವಾಗ ಮತ್ತೆ ವಿಜಯಪುರದಲ್ಲಿ ಪ್ರಬಲವಾಗಿ ಪ್ರಚಾರ ಮಾಡುವೆ ಎಂದರು.

ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಪ್ರಮುಖರಾದ ಧುರ್ಯೋಧನ ಐಹೊಳಿ, ವಿಜುಗೌಡ ಪಾಟೀಲ, ಸೋಮನಗೌಡ ಪಾಟೀಲ ಸಾಸನೂರ, ಕಾಸುಗೌಡ ಬಿರಾದಾರ, ಅಪ್ಪುಗೌಡ ಪಾಟೀಲ ಮನಗೂಳಿ, ರಮೇಶ ಭೂಸನೂರ, ಬಿ.ಜಿ. ಪಾಟೀಲ ಹಲಸಂಗಿ, ಅರುಣ ಶಹಾಪೂರ, ಶಂಕರಗೌಡ ಪಾಟೀಲ, ಸಂಜಯ ಪಾಟೀಲ ಕನಮಡಿ, ಡಾ.ಗೌತಮ ಚೌಧರಿ ಪಾಲ್ಗೊಂಡಿದ್ದರು.

Latest Indian news

Popular Stories