ಶಿಕ್ಷಕರ ದಿನಾಚರಣೆ: ಪ್ರಧಾನಿ ಮೋದಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಗಣ್ಯರಿಂದ ಶುಭಾಶಯ

ನವದೆಹಲಿ: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಭಾರತದ ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ನೆನಪಿಗಾಗಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋದಿಯವರು, ನಮ್ಮ ಭವಿಷ್ಯವನ್ನು ನಿರ್ಮಿಸುವಲ್ಲಿ ಮತ್ತು ಕನಸುಗಳ ನನಸು ಮಾಡಿಕೊಳ್ಳುವಂತೆ ಮಾಡುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಶಿಕ್ಷಕರ ದಿನಾಚರಣೆಯಂದು ಶಿಕ್ಷಕರ ಸಮರ್ಪಣೆ ಮತ್ತು ಪ್ರೇರಣೆಗಾಗಿ ಅವರಿಗೆ ವಂದಿಸುತ್ತೇನೆ. ಡಾ.ಎಸ್.ರಾಧಾಕೃಷ್ಣನ್ ಅವರ ಜನ್ಮದಿನದಂದು ದೇಶದ ಮಾಜಿ ರಾಷ್ಟ್ರಪತಿಗಳಿಗೆ ನಮನಗಳು ಎಂದು ಹೇಳಿದ್ದಾರೆ.

ಜೊತೆಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಆಗಿರುವ ದೇಶದ ವಿವಿಧ ಭಾಗಗಳ ಶಿಕ್ಷಕರೊಂದಿಗೆ ಮಾತುಕತೆ ನಡೆಸಿರುವ ವಿಡಿಯೋವನ್ನು ಮೋದಿಯವರು ಹಂಚಿಕೊಂಡಿದ್ದಾರೆ.

ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಪಾತ್ರರಾಗಿರುವ ನಮ್ಮ ರಾಷ್ಟ್ರದ ಆದರ್ಶಪ್ರಾಯ ಶಿಕ್ಷಕರನ್ನು ಭೇಟಿಯಾದೆ. ಯುವ ಮನಸ್ಸುಗಳನ್ನು ರೂಪಿಸುವಲ್ಲಿ ಅವರ ಸಮರ್ಪಣೆ ಮತ್ತು ಶಿಕ್ಷಣದಲ್ಲಿ ಉತ್ಕೃಷ್ಟತೆಗೆ ಅವರ ಅಚಲ ಬದ್ಧತೆ ಬಹಳ ಸ್ಫೂರ್ತಿದಾಯಕ. ತಮ್ಮ ತರಗತಿಗಳ ಮೂಲಕ ಅವರು ಭಾರತದ ಯುವಕರ ಉಜ್ವಲ ಭವಿಷ್ಯ ರೂಪಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ವಿದ್ಯಾರ್ಥಿಗಳ ಆದರ್ಶ ಗುರು, ಶ್ರೇಷ್ಠ ಶಿಕ್ಷಣ ತಜ್ಞ, ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮದಿನದ ಸ್ಮರಣೆಗಳು. ಎಲ್ಲಾ ಶಿಕ್ಷಕ-ಶಿಕ್ಷಕಿಯರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಎಂದು ಹೇಳಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೋಸ್ಟ್ ಮಾಡಿ, ವರ್ಷದ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವವರು ಶಿಕ್ಷಕರು. ಬದುಕಿನ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳನ್ನು ಅಣಿಮಾಡುವವರು ಆದರ್ಶ ಶಿಕ್ಷಕರು. ಆದರ್ಶ ಶಿಕ್ಷಕರಿಂದ ಮಾತ್ರ ಆದರ್ಶ ವಿದ್ಯಾರ್ಥಿಗಳನ್ನು ರೂಪಿಸಲು ಸಾಧ್ಯ. ವಿದ್ಯಾರ್ಥಿಗಳಿಗೆ ಪುಸ್ತಕ ಜ್ಞಾನವಷ್ಟೇ ಅಲ್ಲ ಬದುಕಿನ ಜ್ಞಾನವನ್ನು ಧಾರೆಯೆರೆಯುವ ಮತ್ತು ಮಾನವೀಯ ಸಂಬಂಧಗಳು ಕುಸಿಯುತ್ತಿರುವ ಈ ಹೊತ್ತಿನಲ್ಲಿ ಹೃದಯದಿಂದ ಬೋಧಿಸುವ ಶಿಕ್ಷಕರ ಅಗತ್ಯ ಸಮಾಜಕ್ಕಿದೆ. ಈ ದಿಸೆಯಲ್ಲಿ ನಾಡಿನ ಶಿಕ್ಷಕ ವರ್ಗದ ಚಿಂತನೆಗಳು ಸಾಗಲಿ ಎಂದು ಹಾರೈಸುತ್ತೇನೆ.

ನನ್ನ ಎಲ್ಲ ಪ್ರೀತಿಯ ಜ್ಞಾನದಾಸೋಹಿ ಶಿಕ್ಷಕ ಬಂಧುಗಳಿಗೆ ಶಿಕ್ಷಕರ ದಿನದ ಶುಭಾಶಯಗಳು. ಈ ದಿನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಗೌರವದಿಂದ ಸ್ಮರಿಸುತ್ತ ನನ್ನ ನಮನಗಳನ್ನು ಸಲ್ಲಿಸುತ್ತೇನೆಂದು ಹೇಳಿದ್ದಾರೆ.

Latest Indian news

Popular Stories