. ಪ್ರಾಯೋಗಿಕವಾಗಿ ಐದು ಗ್ರಾಮ ಸ್ವಯಂ ಸಮೀಕ್ಷೆ….. ಜಿಲ್ಲಾಧಿಕಾರಿಗಳ ನಡೆ ಜನರ ಕಡೆ
ಕೊಡಗಿನಲ್ಲಿ ಎಲ್ಲಾ ಬಾಣೆ ಜಾಗಗಳು ಕಂದಾಯ ನಿಗದಿಯಾಗದೆ ಜಿಲ್ಲೆಯ ಜನತೆ ಸಂಕಷ್ಟ ಎದುರಿಸುತ್ತಿದ್ದು ಇದೀಗ ಜಿಲ್ಲೆಯ ಜನತೆಯ ಕೂಗಿಗೆ ಸ್ಪಂದಿಸಿದ ಸರ್ಕಾರ ಹಾಗೂ ಜಿಲ್ಲಾಡಳಿತ ಜಿಲ್ಲೆಯ ತಾಲೂಕು ವ್ಯಾಪ್ತಿಯಲ್ಲಿ ಒಂದೊಂದು ಗ್ರಾಮವನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡು ಸದರಿ ಗ್ರಾಮದಲ್ಲಿ ಎಲ್ಲಾ ಬಾಣೆ ಜಮೀನುಗಳನ್ನು ಕಂದಾಯ ನಿಗದಿಪಡಿಸಲು ತೀರ್ಮಾನಿಸಿ ಜಂಟಿ ಸಮೀಕ್ಷೆ ನಡೆಸಿ ಕ್ರಮ ವಹಿಸಲು ಅಧಿಕಾರಿಗಳನ್ನು ನೇಮಿಸಲಾಗಿದೆ.
ಈಗಾಗಲೇ ಕಾರ್ಯೋನ್ಮುಖರಾಗಿರುವ ಅಧಿಕಾರಿಗಳು ಸಂಪೂರ್ಣವಾಗಿ ಕಂದಾಯಕ್ಕೆ ಒಳಪಡದ ಜಮೀನುಗಳನ್ನು ಗುರುತಿಸಿ ಅಳತೆ ಮಾಡಿ ಕಂದಾಯ ನಿಗದಿಗೊಳಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಪ್ರಾಯೋಗಿಕವಾಗಿ ಗುರುತಿಸಲಾದ ಗ್ರಾಮಗಳ ನಿವಾಸಿಗಳು ಕಂದಾಯಕ್ಕೆ ಒಳಪಡದ ಜಮೀನುಗಳನ್ನು ಗುರುತಿಸಿ ಸರ್ವೆ ಕಾರ್ಯಕ್ಕೆ ಬರುವ ಅಧಿಕಾರಿಗಳಿಗೆ ಸ್ಥಳವನ್ನು ತೋರಿಸುವ ಕೆಲಸ ಆಗಬೇಕಾಗಿದೆ. ಸದ್ಯದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಇದು ವಿಸ್ತಾರಗೊಂಡು ಮೊದಲ ಹಂತದಲ್ಲಿ ಕಂದಾಯ ನಿಗದಿಗೊಳಿಸುವ ಪ್ರಕ್ರಿಯೆ ನಡೆಯಲಿದ್ದು ಜಿಲ್ಲೆಯ ಜನತೆಯ ಬಹು ಬೇಡಿಕೆಯನ್ನು ಸರ್ಕಾರ ಇದೀಗ ಸ್ಪಂದಿಸಿ ಜನ ಉಪಯೋಗಿ ಕಾರ್ಯಕ್ಕೆ ಮುಂದಾಗಿದೆ. ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಂದಾಯಕ್ಕೆ ಒಳಪಡದ ಬಾಣಿ ಜಮೀನಿ ಗಳಿಗೆ ಕಂದಾಯ ನಿಗದಿ ಪಡಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದ್ದು ಇದರಿಂದ ಸಂಬಂಧಿಸಿದ ಸರ್ವೇ ನಂಬರ್ ನ ಹಕ್ಕುದಾರರಿಗೆ ಜಮೀನುಗಳ ಹಕ್ಕು ವರ್ಗಾವಣೆ,ಭೂ ಪರಿವರ್ತನೆ ,ಸಿವಿಲ್ ನ್ಯಾಯಾಲಯಗಳಲ್ಲಿ ವ್ಯಾಜ್ಯ ದಾಖಲಿಸುವುದು, ಇತ್ಯಾದಿ ಭೂ ಸಂಬಂಧಿತ ವ್ಯವಹಾರಗಳಿಗೆ ತೊಂದರೆಯಾಗುತ್ತಿದ್ದು ಹೆಚ್ಚಿನ ಪ್ರಕರಣಗಳು ತಾಲೂಕು ಕಚೇರಿ ಮತ್ತು ಭೂಮಾಪನ ಕಚೇರಿಗಳಲ್ಲಿ ಬಾಕಿ ಉಳಿದುಕೊಂಡಿದ್ದು ಅವುಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವ ಮತ್ತು ಕಂದಾಯ ನಿಗದಿ ಪ್ರಕರಣಗಳಲ್ಲಿ ಆಗುತ್ತಿರುವ ವಿಳಂಬವನ್ನು ನಿವಾರಿಸುವ ದೃಷ್ಟಿಯಿಂದ ಇಂಥ ಪ್ರಕರಣಗಳನ್ನು ಗ್ರಾಮವಾರು ಆಂದೋಲನದ ಮೂಲಕ ಕ್ರಮ ಜರುಗಿಸಿ ವಿಲೇವಾರಿ ಮಾಡುವ ಅವಶ್ಯಕತೆ ಕಂಡು ಬಂದಿದ್ದರಿಂದ ಜಿಲ್ಲೆಯ ಎಲ್ಲಾ ತಾಲೂಕು ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ.
ಮಡಿಕೇರಿ ತಾಲೂಕಿನ ಭಾಗಮಂಡಲದ ಬೇoಗೂರು ಗ್ರಾಮ, ಸೋಮವಾರಪೇಟೆ ತಾಲೂಕಿನ ಕಿರುಗುಂದೂರು ಗ್ರಾಮ, ಕುಶಾಲನಗರ ತಾಲೂಕಿನ ಸುಂಟಿಕೊಪ್ಪದ ನಕೂರು ಶಿರಂಗಾಲ ಗ್ರಾಮ, ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮ, ಪೊನ್ನಂಪೇಟೆ ತಾಲೂಕಿನ ಕುಂದ ಗ್ರಾಮ ಮೊದಲ ಹಂತದಲ್ಲಿ ಪ್ರಾಯೋಗಿಕ ಸಮೀಕ್ಷೆ ನಡೆಸಿ ಕಂದಾಯ ನಿಗದಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.