ತಿರುವನಂತಪುರಂ: ಕಾರಿನಿಂದ ಇಳಿದು SFI ಕಾರ್ಯಕರ್ತರ ವಿರುದ್ಧ ಕೇರಳ ರಾಜ್ಯಪಾಲರ ಆಕ್ರೋಶ

ರಾಜ್ಯಪಾಲರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ
19 SFI ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ತಿರುವನಂತಪುರಂ: SFI ಕಾರ್ಯಕರ್ತರು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕಾರು ತಡೆದು ಕಪ್ಪು ಬಾವುಟ ಪ್ರದರ್ಶಿಸಿದ ಘಟನೆ ತಿರುವನಂತಪುರದಲ್ಲಿ ನಡೆದಿದೆ. ಈ ವೇಳೆ ಆಕ್ರೋಶಗೊಂಡ ರಾಜ್ಯಪಾಲರು ಕಾರಿನಿಂದ ಇಳಿದು ಪ್ರತಿಭಟನಕಾರರ ವಿರುದ್ಧ ಮುಗಿಬಿದ್ದಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕೇರಳ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ 19 SFI ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ಏಳು ಮಂದಿಯ ವಿರುದ್ಧ ಜಾಮೀನು ರಹಿತ ಸೆಕ್ಷನ್‌ಗಳನ್ನು ಹಾಕಲಾಗಿದೆ.

ಸೋಮವಾರ ತಿರುವನಂತಪುರದಲ್ಲಿ ತೆರಳುತ್ತಿದ್ದ ರಾಜ್ಯ ಪಾಲರಿಗೆ ಮೂರು ಕಡೆಗಳಲ್ಲಿ ಈ ರೀತಿಯ ಪ್ರತಿಭಟನೆ ಎದುರಿಸಬೇಕಾಯಿತು. ಮೊದಲು ಕೇರಳ ವಿಶ್ವ ವಿದ್ಯಾಲಯದ ಮುಂಭಾಗ ಬಳಿ ವಂಜಿಯೂರು ಹಾಗೂ ಪೇಟ ಬಳಿ ಕಪ್ಪು ಬಾವುಟ ಪ್ರದರ್ಶಿಸಲಾಯಿತು. ಆದರೆ ಪೇಟ ಬಳಿ ಸಹನೆ ಕಳೆದುಕೊಂಡ ಆರಿಫ್ ಮೊಹಮ್ಮದ್ ಖಾನ್, ಕಾರಿನಿಂದ ಇಳಿದು ‘ಬ್ಲಡಿ ಫೂಲ್ಸ್….. ಕ್ರಿಮಿನಲ್ಸ್…. ಕೌವಾರ್ಡ್ಸ್…. ಮೊದಲಾದ ಪದ ಬಳಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಪ್ರತಿಭಟನಕಾರರಲ್ಲಿ ತನ್ನ ಬಳಿ ಬರುವಂತೆ ತೊಡೆ ತಟ್ಟಿದರು.

ಈ ನಡುವೆ ಬಂಧಿತರನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕೇರಳದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ.

Latest Indian news

Popular Stories