ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಂ.ಟಿ. ರೇಜು ಸೂಚನೆ

ಸರ್ಕಾರ ಜನಸಾಮಾನ್ಯರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಇದನ್ನು ಸಮರ್ಪಕವಾಗಿ ಪ್ರತಿಶತ ನೂರರಷ್ಟು ಅನುಷ್ಠಾನಗೊಳಿಸಬೇಕೆಂದು ಆರ್ಥಿಕ ಇಲಾಖೆ ಕಾರ್ಯದರ್ಶಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ಟಿ. ರೇಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಯ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸರ್ಕಾರವು ಜನಸಾಮಾನ್ಯರ ಶ್ರೇಯೋಭಿವೃದ್ಧಿಗೆ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಅವರಿಗೆ ಅರಿವು ಮೂಡಿಸಿ ಅರ್ಹ ಫಲಾನುಭವಿಗಳಿಗೆ ತಲಪುವ ಹಾಗೆ ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದರು.

ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಈವರೆಗೆ 2,56,850 ಗುರಿ ಹೊಂದಿ 2,11,478 ರಷ್ಟು ನೋಂದಣಿಯಾಗಿ ಶೇಕಡಾ 82.34 ರಷ್ಟು ಆಗಿದ್ದು, ಈಗಲೂ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ರೇಷನ್ ಕಾರ್ಡ್ ನ ಸಮಸ್ಯೆಗಳು ಅಥವಾ ಆನ್ ಲೈನ್ ಪೋರ್ಟಲ್ಲಿನ ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿಯವರ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದರು.

ಇಂದು ಹಿರಿಯಡ್ಕದ ಅಂಗನವಾಡಿಗೆ ಭೇಟಿ ನೀಡಿದಾಗ ಅಲ್ಲಿ ಮಕ್ಕಳಿಗೆ ನೀಡುವ ಆಹಾರದ ಕಿಟ್ ಬಗ್ಗೆ ಮೇಲ್ವಿಚಾರಕರಿಗೆ ಸರಿಯಾಗಿ ಮಾಹಿತಿ ಇರುವುದಿಲ್ಲ ಕಿಟ್ ಗಳು ವಿತರಣೆ ಆಗುತ್ತಿರುವ ಬಗ್ಗೆ ಹಾಗೂ ಕಾಲಕಾಲಕ್ಕೆ ಆಹಾರ ವಿತರಣೆ ಮಾಡುತ್ತಿರುವ ಬಗ್ಗೆ ಸಂಬಂಧಿಸಿದ ರಿಜಿಸ್ಟರ್ ಸರಿಯಾಗಿ ನಿರ್ವಹಣೆ ಮಾಡದೇ ಇರುವುದು ಕಂಡು ಬಂದಿದೆ, ಈ ಬಗ್ಗೆ ಪರಿಶೀಲಿಸಿ ಜಿಲ್ಲಾಧಿಕಾರಿಯವರಿಗೆ ವರದಿ ನೀಡಬೇಕು ಎಂದರು.

ಶಿಶು ಅಭಿವೃದ್ಧಿ ಅಧಿಕಾರಿಗಳು ಹಾಗೂ ಉಪ ನಿರ್ದೇಶಕರು ಆಗಿಂದಾಗ್ಗೆ ಅಂಗನವಾಡಿಗೆ ಭೇಟಿ ನೀಡಬೇಕು. ಸರ್ಕಾರದ ಯೋಜನೆಗಳು ಸುತ್ತೋಲೆಗಳ ಬಗ್ಗೆ ತಮ್ಮ ಕೆಳಗಿನ ಅಧಿಕಾರಿ ಯವರಿಗೆ ಮಾಹಿತಿ ನೀಡಬೇಕು ಎಂದ ಅವರು ಅಂಗನವಾಡಿಯ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಿ, ಮಕ್ಕಳಿಗೆ ಆಟಿಕೆಗಳನ್ನು ಆಟ ಆಡಲು ನೀಡಬೇಕು ಎಂದರು.

ವಿದ್ಯಾರ್ಥಿ ನಿಲಯಗಳಲ್ಲಿ ಪ್ರಸ್ತುತ ಸಾಲಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರ್ಕಾರದ ಸೂಚನೆಯ ಅನ್ವಯದಲ್ಲಿ ನೀಡಬೇಕು. ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ನಿಲಯಗಳನ್ನು ಸ್ವಂತ ಕಟ್ಟಡವಾಗಿ ಪರಿವರ್ತಿಸಲು ಮುಂದಾಗಬೇಕು ಅಗತ್ಯವಿದ್ದಲ್ಲಿ ಶಿಕ್ಷಣ ಇಲಾಖೆಯ ಜಾಗಗಳನ್ನು ಬಳಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಬೇಕೆಂದು ಸೂಚನೆ ನೀಡಿದರು.

ಶಕ್ತಿ ಯೋಜನೆಯಡಿ ಹೆಣ್ಣು ಮಕ್ಕಳು ಬಸ್ಸಿನಲ್ಲಿ ಉಚಿತವಾಗಿ ಸಂಚರಿಸುವ ಯೋಜನೆಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದ್ದು ಜಿಲ್ಲೆಗೆ ಹೆಚ್ಚುವರಿ 50 ಬಸ್ಸುಗಳು ಬೇಕೆಂಬ ಬೇಡಿಕೆ ಕೇಳಿ ಬರುತ್ತಿದೆ ಹಾಗೂ ಜಿಲ್ಲೆಯಲ್ಲಿ ಖಾಸಗಿ ಬಸ್ಸಿನಲ್ಲಿಯೂ ಶಕ್ತಿ ಯೋಜನೆ ಜಾರಿಗೆ ತರಬೇಕು ಎಂಬ ಬೇಡಿಕೆ ಇದ್ದು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಸರ್ಕಾರ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆಗಳನ್ನುಒದಗಿಸಲು ಹೆಚ್ಚಿನ ಅನುದಾನವನ್ನು ನೀಡುತ್ತಿದೆ, ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕು ಎಂದ ಅವರು ಜಿಲ್ಲೆಯಲ್ಲಿ ತಾಯಿ ಮತ್ತು ಮಕ್ಕಳ ಮರಣ ಸಂಖ್ಯೆ ಹೆಚ್ಚಿರುವುದು ಕಂಡು ಬಂದಿದೆ. ಗರ್ಭಿಣಿಯರಿಗೆ ಸಕಾಲದಲ್ಲಿ ತಾಯಿ ಕಾರ್ಡನ್ನು ವಿತರಿಸಿ ಕಾಲಕಾಲಕ್ಕೆ ಅವರಿಗೆ ಆರೋಗ್ಯ ತಪಾಸಣೆ ನೀಡಿ ಚಿಕಿತ್ಸೆ ನೀಡಬೇಕು. ಗರ್ಭಿಣಿಯರ ಆರೋಗ್ಯ ಸುಧಾರಣೆಯ ಕುರಿತು ಕಾರ್ಯಗಾರಗಳನ್ನು ಪ್ರಾಥಮಿಕ ಆರೋಗ್ಯ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಸೇರಿದಂತೆ ಮತ್ತಿತರ ಆರೋಗ್ಯ ಸಿಬ್ಬಂದಿಗೆ ಆಯೋಜಿಸಬೇಕು ಎಂದರು

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ , ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಸನ್ನ. ಹೆಚ್ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು

Latest Indian news

Popular Stories