ಉಡುಪಿ: ಹರ್ಷ ಮಳಿಗೆ ಮ್ಯಾನೆಜರ್’ಗೆ ಚೂರಿ ಇರಿತ ಪ್ರಕರಣ: ಸೆಕ್ಯುರಿಟಿ ಗಾರ್ಡ್ ಬಂಧನ | VIDEO

ಉಡುಪಿ: ಕೆಲಸದಿಂದ ತೆಗೆಯುವ ವಿಚಾರದಲ್ಲಿ ಕೋಪಗೊಂಡ ಸೆಕ್ಯುರಿಟಿ ಗಾರ್ಡ್ ಉಡುಪಿ ನಗರದ ಹರ್ಷ ಗೃಹೋಪಯೋಗಿ ಮಳಿಗೆಯ ಮೆನೇಜರ್ಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸೆಕ್ಯುರಿಟಿ ಗಾರ್ಡ್ನನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಇಗಲ್ ಐ ಸೆಕ್ಯೂರಿಟಿ ಗಾರ್ಡ್ ಕಂಪನಿಯ ಸಿಬ್ಬಂದಿ, ಹರ್ಷ ಮಳಿಗೆಯ ಸೆಕ್ಯುರಿಟಿ ಗಾರ್ಡ್ ಪ್ರಸಾದ್ ಎಂದು ಗುರುತಿಸ ಲಾಗಿದೆ. ಹರ್ಷ ಮಳಿಗೆಯ ಕ್ಲಸ್ಟರ್ ಮ್ಯಾನೇಜರ್ ರೋನ್ಸನ್ ಎವರೆಸ್ಟ್ ಡಿಸೋಜ(36) ಎಂಬವರು ಚೂರಿ ಇರಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆ.9ರಂದು ಕೆಲಸಕ್ಕೆ ಬಂದಿದ್ದ ಪ್ರಸಾದ್, ಮಧ್ಯಾಹ್ನದವರೆಗೆ ಮಾತ್ರ ಕೆಲಸ ಮಾಡಿ ಹೋಗಿದ್ದನು. ಈ ಕುರಿತು ಆತನ ಸೆಕ್ಯೂಟಿರಿ ಗಾರ್ಡ್ ಕಂಪನಿಯ ಮ್ಯಾನೇಜರ್ಗೆ ತಿಳಿಸಲಾಗಿತ್ತು. ಆ.10ರಂದು ಪ್ರಸಾದ್ ಕೆಲಸಕ್ಕೆ ಹಾಜರಿದ್ದು, ಸಂಜೆ ವೇಳೆ ರೋನ್ಸನ್ ಡಿಸೋಜ ಅವರನ್ನು ಪ್ರಸಾದ್ ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿಯ ಶೋರೂಂಗೆ ಬರಲು ತಿಳಿಸಿದ್ದನು. ಅದರಂತೆ ಬಂದ ರೋನ್ಸನ್ ಅವರಲ್ಲಿ ನನ್ನನ್ನು ಕೆಲಸದಿಂದ ತೆಗೆಯಬೇಡಿ ಎಂದು ಪ್ರಸಾದ್ ಹೇಳಿದನು. ಅದಕ್ಕೆ ಮರುದಿನ ಅಧಿಕಾರಿಗಳೊಂದಿಗೆ ಮೀಟಿಂಗ್ನಲ್ಲಿ ಚರ್ಚಿಸಿ ತಿಳಿಸುತ್ತೇನೆ ಎಂದು ಹೇಳಿದ್ದರು.

ಇದರಿಂದ ಸಿಟ್ಟುಕೊಂಡ ಪ್ರಸಾದ್, ಅವಾಚ್ಯ ಶಬ್ಧಗಳಿಂದ ಬೈದಿದ್ದು, ಕಟ್ಟಡದ ಗ್ರೌಂಡ್ ಪ್ಲೋರ್ನಲ್ಲಿ ರೋನ್ಸನ್ ಡಿಸೋಜರನ್ನು ಅಡ್ಡಗಟ್ಟಿದ ಚೂರಿಯಿಂದ ಕುತ್ತಿಗೆ, ಎದೆಗೆ ಚುಚ್ಚಿ, ಕಾಲಿನಿಂದ ಒದ್ದು, ಬೆದರಿಕೆ ಹಾಕಿ ಪರಾರಿಯಾಗಿದ್ದನು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ

Latest Indian news

Popular Stories