ಹೊಸದಿಲ್ಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ನಿಟ್ಟಿನಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ನೇತೃತ್ವದ ಉತ್ತರಾಖಂಡ ಸಚಿವ ಸಂಪುಟವು ಸಮಾನ ನಾಗರಿಕ ಸಂಹಿತೆ ಮಸೂದೆಗೆ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಇಂದು ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡನೆ ಮಾಡಲಿದೆ.
ಕಳೆದ ಭಾನುವಾರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ನೇತೃತ್ವದ ಉತ್ತರಾಖಂಡ ಸಚಿವ ಸಂಪುಟವು ನಡೆಸಿದ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು ಅದರಂತೆ ಸಚಿವ ಸಂಪುಟವು ಮಸೂದೆ ಮಂಡನೆಗೆ ಒಪ್ಪಿಗೆಯನ್ನೂ ನೀಡಿತ್ತು ಇಂದು (ಮಂಗಳವಾರ) ನಡೆಯುವ ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡನೆ ಮಾಡಲಿದೆ ಎನ್ನಲಾಗಿದೆ.
ಒಂದು ವೇಳೆ ಸದನದಲ್ಲಿ ಮಸೂದೆ ಅಂಗೀಕಾರವಾದರೆ, ಬಿಜೆಪಿ ಆಡಳಿತವಿರುವ ಉತ್ತರಾಖಂಡ ರಾಜ್ಯವು ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಅಳವಡಿಸಿಕೊಂಡ ದೇಶದ ಮೊದಲ ರಾಜ್ಯವಾಗಲಿದೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ, ಇಂದು ಮಂಡನೆಯಾಗಲಿರುವ ಯುಸಿಸಿ ಮಸೂದೆಯ ಕೆಲವು ಪ್ರಮುಖ ಲಕ್ಷಣಗಳು ಮಗ ಮತ್ತು ಮಗಳಿಗೆ ಸಮಾನ ಆಸ್ತಿ ಹಕ್ಕು, ಕಾನೂನುಬದ್ಧ ಮತ್ತು ನ್ಯಾಯಸಮ್ಮತವಲ್ಲದ ಮಕ್ಕಳ ನಡುವಿನ ವ್ಯತ್ಯಾಸವನ್ನು ತೊಡೆದುಹಾಕಲು, ದತ್ತು ಪಡೆದ ಮತ್ತು ಜೈವಿಕವಾಗಿ ಜನಿಸಿದ ಮಕ್ಕಳನ್ನು ಸೇರಿಸುವುದು ಮತ್ತು ಸಾವಿನ ನಂತರ ಸಮಾನ ಆಸ್ತಿ ಹಕ್ಕುಗಳನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ.
ನಾಲ್ಕು ಸಂಪುಟಗಳಲ್ಲಿ 740 ಪುಟಗಳಿರುವ ಏಕರೂಪ ನಾಗರಿಕ ಸಂಹಿತೆಯ ಅಂತಿಮ ಕರಡನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಐದು ಸದಸ್ಯರ ಸಮಿತಿಯು ಫೆಬ್ರವರಿ 2 ರಂದು ಮುಖ್ಯಮಂತ್ರಿ ಧಾಮಿ ಅವರಿಗೆ ಸಲ್ಲಿಸಿದೆ. ಇಂದು ಈ ಕರಡನ್ನು ಮುಖ್ಯಮಂತ್ರಿ ಮಂಡನೆ ಮಾಡಲಿದ್ದಾರೆ.
ಮಸೂದೆ ಜಾರಿಯಾದರೆ ರಾಜ್ಯದಲ್ಲಿ ನಡೆಯುವ ಮದುವೆ, ವಿಚ್ಛೇದನ, ಆಸ್ತಿ ಹಕ್ಕು- ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲ ಧರ್ಮಗಳಿಗೂ ಒಂದೇ ಕಾನೂನು ಅನ್ವಯವಾಗಲಿದೆ. ಈವರೆಗೂ ಆಯಾಯ ಧರ್ಮಗಳು ಆಯಾಯ ವೈಯಕ್ತಿಕ ಕಾನೂನು ಕ್ರಮಗಳನ್ನು ಅನುಸರಿಸುತ್ತಿದ್ದವು. ಇದು ಸಮಾಜದಲ್ಲಿ ಗೊಂದಲಕ್ಕೆ ಕಾರಣವಾಗುತ್ತಿತ್ತು. ಆದರೆ ಈ ಮಸೂದೆ ಮಂಡನೆಯಾದರೆ ಎಲ್ಲ ಧರ್ಮಗಳಿಗೂ ಒಂದೇ ಕಾನೂನು ಅನ್ವಯವಾಗಲಿದೆ.