ಅಜೀತ್ ಹನುಮಕ್ಕನವರ್ ವಿರುದ್ಧ ಕ್ರಮಕ್ಕೆ ಒತ್ತಾಯ

ರಾಯಚೂರು: ಸುವರ್ಣ ನ್ಯೂಸ್ ನಿರೂಪಕ ಅಜೀತ್ ಹನುಮಕ್ಕನವರ್ ಮತೀಯ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ, ಮುಸ್ಲಿಂ ಸಮುದಾಯವನ್ನು ಪಾಕಿಸ್ತಾನದ ಧ್ವಜದೊಂದಿಗೆ ಗುರುತಿಸಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಮುಸ್ಲಿಂ ಮುಖಂಡರು ಶನಿವಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದರು.

ಏಷ್ಯನೆಟ್ ಸುವರ್ಣ ವಾಹಿನಿಯಲ್ಲಿ ಮೇ 9ರಂದು ರಾತ್ರಿ 8.30ಕ್ಕೆ ‘ಹಿಂದುಗಳ ಜನಸಂಖ್ಯೆಯಲ್ಲಿ ಭಾರಿ ಇಳಿಕೆ ಹಾಗೂ ಮುಸ್ಲಿಮರ ಜನಸಂಖ್ಯೆಯಲ್ಲಿ ಭಾರಿ ಏರಿಕೆ’ ಎನ್ನುವ ವಿಷಯದ ಕುರಿತು ಚರ್ಚೆ ನಡೆಸುವ ಸಂದರ್ಭದಲ್ಲಿ ಹಿಂದುಗಳ ಜನಸಂಖ್ಯೆಯನ್ನು ತೋರಿಸುವಾಗ ಭಾರತದ ತ್ರಿವರ್ಣಧ್ವಜದ ಜೊತೆ ಹಾಗೂ ಮುಸ್ಲಿಮರ ಜನಸಂಖ್ಯೆಯನ್ನು ತೋರಿಸುವಾಗ ಪಾಕಿಸ್ತಾನದ ಧ್ವಜ ಗುರುತಿಸಿ ಅವಮಾನ ಮಾಡಿದ್ದಾರೆ ಎಂದು ದೂರಿದರು.

ರಾಜ್ಯ, ಹಾಗೂ ದೇಶದ ಕೋಟ್ಯಾಂತರ ಜನ ಕಾರ್ಯಕ್ರಮವನ್ನು ವೀಕ್ಷಿಸಿದ್ದು ಮತೀಯ ದ್ವೇಷ ಹರಿಡಿದ್ದಾರೆ. ಈ ಕಾರ್ಯಕ್ರಮದಿಂದ ಮುಸ್ಲಿಮರ ಭಾವನೆಗೆ ಧಕ್ಕೆಯಾಗಿದೆ. ರಾಜ್ಯದ ಎರಡು ಸಮುದಾಯಗಳ ನಡುವೆ ದ್ವೇಷವನ್ನು ಹರಡಲು ಸಂಚು ರೂಪಿಸಿದ್ದಾರೆ. ರಾಷ್ಟ್ರೀಯ ಭಾವೈಕ್ಯತೆಗೆ ಹಾಗೂ ರಾಷ್ಟ್ರಹಿತಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿದರು.

ದೇಶದ ಮುಸ್ಲಿಮರು ಪಾಕಿಸ್ತಾನದವರು ಎನ್ನುವ ಪ್ರಯತ್ನದಿಂದ ಕಾರ್ಯಕ್ರಮ ನಿರೂಪಿಸಲಾಗಿದೆ. ಸುದ್ದಿ ನಿರೂಪಕ ಅಜೀತ್ ಹನುಮಕ್ಕನವರ್ ಹಲವು ಬಾರಿ ಮುಸ್ಲಿಂ ಸಮುದಾಯದ ವಿರುದ್ಧ ಅವಮಾನಿಸುವಂಹ ಸುದ್ದಿಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಅವರ ಮೇಲೆ ವಿವಿಧ ಠಾಣೆಗಳಲ್ಲಿ ಈಗಾಗಲೇ ದೂರು ದಾಖಲಾಗಿದೆ. ಇವರು ಹವ್ಯಾಸಿ ಅಪರಾಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಕಾನೂನಿನ ಬಗ್ಗೆ ಗೌರವವಿಲ್ಲದೇ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಸುದ್ದಿ ವಾಹಿನಿ ಹಾಗೂ ಅಜೀತ್ ಮೇಲೆ ಐಪಿಸಿ 153 ಎ, 153ಬಿ, 298,124, 124 ಎ ಅಡಿಯಲ್ಲಿ ಶಿಕ್ಷೆಗೆ ಒಳಪಡಿಸಿ ಸುದ್ದಿ ವಾಹಿನಿಯ ಪ್ರಸರಣ ರದ್ದುಪಡಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ರಝಾಕ್ ಉಸ್ತಾದ್, ಅಬ್ದುಲ್ ಹೈ ಫೆರೋಜ್, ಸೈಯದ್ ಜಾವಿದ್ ಉಲ್ ಹಕ್, ಮೊಹಮ್ಮದ್ ಉಸ್ಮಾನ್, ಸೈಯದ್ ಅಮೀನುಲ್ ಹಸನ್, ಖಾಜಾ ಮೋಯಿನುದ್ದೀನ್ ಇದ್ದರು.

Latest Indian news

Popular Stories