ಜು.21ರವರೆಗೆ ವಿಧಾನಮಂಡಲ ಅಧಿವೇಶನ ವಿಸ್ತರಣೆ, ಜು.7ಕ್ಕೆ ಸಿಎಂ ಸಿದ್ದರಾಮಯ್ಯರಿಂದ ಬಜೆಟ್ ಮಂಡನೆ

ಬೆಂಗಳೂರು: ವಿಧಾನಮಂಡಲ ಅಧಿವೇಶನವನ್ನು ಜುಲೈ 21ರವರೆಗೆ ವಿಸ್ತರಿಸಲಾಗಿದ್ದು, ಜುಲೈ 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14ನೇ ಬಾರಿ ಬಜೆಟ್ ಮಂಡಿಸಲಿದ್ದಾರೆ.

ವಿಧಾನಮಂಡಲ ಅಧಿವೇಶನವನ್ನು ಜುಲೈ 21 ರಂದು ವರೆಗೆ ನಡೆಸಲು ಬಿಎಸಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರು ಹೇಳಿದ್ದಾರೆ. ಈ ಮುಂಚೆ ಜುಲೈ 3 ರಿಂದ ಜುಲೈ 14 ವರೆಗೆ ವಿಧಾನಮಂಡಲ ಅಧಿವೇಶನ ನಿಗದಿಯಾಗಿತ್ತು. ಇದೀಗ ಅದನ್ನು 21ರ ವರೆಗೆ ವಿಸ್ತರಿಸಲಾಗಿದೆ.

ಈ ಮಧ್ಯೆ ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದ್ದು, ಗ್ಯಾರಂಟಿ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಗ್ಯಾರಂಟಿ ಜಾರಿ ಬಗ್ಗೆ ಯಾವ ರೀತಿ ಮೋಸ ಆಗಿದೆ ಎಂದು ನಿಲುವಳಿ ಸೂಚನೆ ನೀಡಿದ್ದೇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಮೊದಲು ಷರತ್ತು ಇಲ್ಲದೆ ಗ್ಯಾರಂಟಿ ಜಾರಿ ಎಂದು ಹೇಳಿದ್ದರು. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಿದರೆ ನಾವು ಚರ್ಚೆ ಮಾಡುತ್ತೇವೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಚರ್ಚೆಗೆ ಅವಕಾಶ ನೀಡುತ್ತೇನೆ. ದಿನಕ್ಕೆ ಒಂದು ನಿಲುವಳಿ ಮಾತ್ರ ಚರ್ಚೆಗೆ ಎತ್ತಿಕೊಳ್ಳಬಹುದು, ತಾವೆಲ್ಲ ಧರಣಿ ಕೈಬಿಟ್ಟು ಆಸನಕ್ಕೆ ಬನ್ನಿ ಎಂದು ಸ್ಪೀಕರ್ ಯುಟಿ ಖಾದರ್ ಮನವಿ ಮಾಡಿದರು.

ಇದಕ್ಕೆ ಒಪ್ಪದ ಬಿಜೆಪಿ ಸ್ಪೀಕರ್ ಯು.ಟಿ‌.ಖಾದರ್ ಓನ್ ಸೈಡ್ ಸ್ಪೀಕರ್, ಓನ್ ಸೈಡ್ ಸ್ಪೀಕರ್ ಎಂದು ಘೋಷಣೆ ಕೂಗಲು ಆರಂಭಿಸಿದರು. ಬಿಜೆಪಿ ಗದ್ದಲ ಮುಂದುವರಿದ ಹಿನ್ನೆಲೆ ಕಲಾಪವನ್ನು ಸ್ಪೀಕರ್ ಯು.ಟಿ.ಖಾದರ್‌ ಅವರು ನಾಳೆ ಬೆಳಗ್ಗೆ 10.30ಕ್ಕೆ ಮುಂದೂಡಿದ್ದಾರೆ

ಇನ್ನು ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆಗೆ ಆಗ್ರಹಿಸಿ ಬಿಜೆಪಿ ಸದಸ್ಯರ ಧರಣಿ ಹಿನ್ನೆಲೆಯಲ್ಲಿ ವಿಧಾನಪರಿಷತ್ ಕಲಾಪವನ್ನು ಸಭಾಪತಿ ಬಸವರಾಜ ಹೊರಟ್ಟಿ ಅವರು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದ್ದಾರೆ.

Latest Indian news

Popular Stories