ವಿಜಯಪುರ : ಕೋಯ್ನಾ ಜಲಾಶಯದಿಂದ 3 ಟಿಎಂಸಿ ವಿಜಯಪುರಕ್ಕೆ ನೀರು ಹರಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆಯುವ ನಿಟ್ಟಿನಲ್ಲಿ ಹಾಗೂ ಈ ವಿಷಯವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ವಿಜಯಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೆಡಿಪಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಸಕ್ಕರೆ ಸಚಿವ ಶಿವಾನಂದ ಪಾಟೀಲ ಕೊಯ್ನಾ ಜಲಾಶಯದಿಂದ ನೀರು ಹರಿಸಿಕೊಳ್ಳಿ ಎಂಬ ಸಲಹೆ ನೀಡಿದರು.
ಅದಕ್ಕೆ ಸಹಮತ ವ್ಯಕ್ತಪಡಿಸಿದ ಸಚಿವ ಎಂ.ಬಿ. ಪಾಟೀಲ, ನಿಮ್ಮ ಪಕ್ಕದಲ್ಲಿಯೇ ಹುಕ್ಕೇರಿ ಅವರು ಕುಳಿತಿದ್ದಾರೆ, ಅವರ ಬಳಿಯೇ ಛಾವಿ ಇದೆ ಎಂದರು. ಆಗ ಪ್ರಕಾಶ ಹುಕ್ಕೇರಿ, ನೀರು ಹರಿಸಿಕೊಳ್ಳವುದು ಸರ್ಕಾರಿ ಅಧಿಕಾರಿಗಳ ಮಟ್ಟದಲ್ಲಿ ನಡೆಯುವಂತಹದ್ದಲ್ಲ, ಎರಡು ಸರ್ಕಾರಗಳು ಕುಳಿತು ಮಾತನಾಡಿದಾಗ ನೀರು ಬರಬಹುದು ಎಂದರು.
ಆಗ ಸಚಿವ ಎಂ.ಬಿ. ಪಾಟೀಲ, ಕೂಡಲೇ ಜಿಲ್ಲಾಡಳಿತ ಕನಿಷ್ಠ 3 ಟಿಎಂಸಿ ನೀರನ್ನಾದರೂ ವಿಜಯಪುರಕ್ಕೆ ಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಾಗಿ ನಮ್ಮ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳೂವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದರು.
ಸಚಿವ ಶಿವಾನಂದ ಪಾಟೀಲ, ಪ್ರಸ್ತುತ ಸರ್ಕಾರಕ್ಕೆ ಅದರ ಜೊತೆಗೆ ಜಲಸಂಪನ್ಮೂಲ ಸಚಿವರಿಗೂ ಮನವಿ ಮಾಡಿ, ನಿಯೋಗದೊಂದಿಗೆ ಈ ವಿಷಯವಾಗಿ ಭೇಟಿ ಮಾಡಿದರೂ ಚಿಂತೆಯಿಲ್ಲ ಎಂದರು.
ಗ್ರಾಮೀಣ ಕುಡಿಯುವ ನೀರಿನ ಕುರಿತು ವಿವರಣೆ ನೀಡಿದ ಸಿಇಓ ರಾಹುಲ್ ಶಿಂಧೆ, ಇಂಡಿ ಭಾಗದ ಅಡವಿ ವಸ್ತಿಯಲ್ಲಿ ಪ್ರತಿ ವರ್ಷ ಹಳಗುಣಕಿ, ಬಸನಾಳ, ಚವಡಿಹಾಳ, ಶಿರನಾಳ ಗ್ರಾಮದಲ್ಲಿ ಎಪ್ರಿಲ್ ತಿಂಗಳಿಂದಲೇ 7 ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ, ಮೇ-ಜೂನ್ ತಿಂಗಳಲ್ಲಿ ಚಡಚಣ, ಹಲಸಂಗಿ, ಜೀಗಜೀವಣಗಿ ಗ್ರಾಮದಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಸಿಇಓ ಶಿಂಧೆ ತಿಳಿಸಿದರು.
ತಿಕೋಟಾ ಬಹುಹಳ್ಳಿ ಕುಡಿಯುವ ಯೋಜನೆ 400 ಎಚ್ಪಿ ಸಾಮರ್ಥ್ಯದ ಮೋಟಾರ್ ಕೆಟ್ಟಿರುವುದರಿಂದ ಸ್ಥಗಿತಗೊಂಡಿದ್ದು, ಟಕ್ಕಳಕಿ, ಇಟ್ಟಂಗಿಹಾಳ, ಜಾಲಗೇರಿ
ತಿಕೋಟಾ ಎಂವಿಎಸ್ 400 ಎಚ್ಪಿ ಮೋಟಾರ್ ಸುಟ್ಟು ಹೋಗಿರುವುದರಿಂದ ಟಕ್ಕಳಕಿ, ಇಟ್ಟಂಗಿಹಾಳ ಗ್ರಾಮಗಳಿಗೆ ಟ್ಯಾಂಕರ್ ಮುಖಾಂತರ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.
ಯಾವ ಕಾರಣಕ್ಕೂ ಕುಡಿಯುವ ನೀರಿನ ತೊಂದರೆಯಾಗದಂತೆ ಸಮರೋಪಾದಿಯಲ್ಲಿ ಕಾರ್ಯ ಕೈಗೊಳ್ಳಿ, ಈ ವಿಷಯವಾಗಿ ಯಾವ ನಿರ್ಲಕ್ಷ್ಯ ವಹಿಸಬೇಡಿ ಎಂದು ಸೂಚಿಸಿದರು.
ಜುಲೈ ಮಾಸಾಂತ್ಯದವರೆಗೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಲಭ್ಯತೆ ಸಮರ್ಪಕವಾಗಿದೆ, ಜುಲೈ ನಂತರ ಕುಡಿಯುವ ನೀರಿನ ಕೊರತೆಯಾಗದಂತೆ ಸನ್ನದ್ಧರಾಗುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜುಲೈನಲ್ಲಿ ಕುಡಿಯುವ ನೀರಿನ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಶಾಲೆ, ಆಸ್ಪತ್ರೆ ಹಾಗೂ ಸರ್ಕಾರಿ ಆಸ್ತಿಯಲ್ಲಿರುವ 890 ಕೊಳವೆಬಾವಿ ಹಾಗೂ 653 ಖಾಸಗಿ ಬೋರವೆಲ್ಗಳನ್ನು ಗುರುತಿಸಲಾಗಿದ್ದು, ಬೋರವೆಲ್ನಲ್ಲಿ ನೀರು ಬತ್ತಿದರೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಆದ್ಯತೆ ನೀಡಲಾಗುವುದು ಎಂದರು.
ಟ್ಯಾಂಕರ್ ಮುಖಾಂತರ ನೀರು ಪೂರೈಕೆಗೂ ಮುನ್ನ ಒಂದು ಅಥವಾ ಎರಡು ಬೋರವೆಲ್ಗಳನ್ನು ಕೊರೆಯಿಸಿ ನೋಡಿ, ಅಲ್ಲಿ ನೀರು ಲಭ್ಯವಾಗದೇ ಇದ್ದರೆ ಟ್ಯಾಂಕರ್ ಮೂಲಕ ನೀರು ಕೊಡಿ ಎಂದು ಪಾಟೀಲ ಸಲಹೆ ನೀಡಿದರು.
ಜಾತಿ, ಧರ್ಮ ಆಧರಿಸಿ ವಾರ್ಡಗಳಿಗೆ ಕುಡಿಯುವ ನೀರು, ರಸ್ತೆ ಮಾಡುವುದು ನಡೆದಿದೆ, ಈ ರೀತಿ ಆದರೆ ನಾನು ಹಾಗೂ ನಮ್ಮ ಸರ್ಕಾರ ಸಹಿಸುವುದಿಲ್ಲ, ನಗರದಲ್ಲಿ ಏನು ನಡೆದಿದೆ ಎಂಬುದು ನನಗೆ ಗೊತ್ತಿದೆ, ಆದರೆ ಅದನ್ನು ಬೆಳೆಸಲು ಹೋಗುವುದಿಲ್ಲ, ಜಿಲ್ಲಾಧಿಕಾರಿಗಳು ಸಹ ಈ ವಿಷಯವಾಗಿ ಮೌನ ವಹಿಸಿದ್ದೀರಿ ಎಂದು ಎಂ.ಬಿ. ಪಾಟೀಲ ಗರಂ ಆದರು.
ಕೆಲವೊಂದು ವಾರ್ಡಗಳಲ್ಲಿ ಜಾತಿ, ಧರ್ಮ ಆಧರಿಸಿ ಕುಡಿಯುವ ನೀರು, ರಸ್ತೆ ಮಾಡಲಾಗುತ್ತಿದೆ, ಜಾತಿ, ಧರ್ಮದ ಆಧಾರದ ಮೇಲೆ ನೀರು ಕೊಡುತ್ತೀರಾ? ಈ ಬಗ್ಗೆ ನಾನು ವಿಷಯ ಬೆಳೆಸಲು ಹೋಗುವುದಿಲ್ಲ, ನೀವು ಸಹ ಈ ವಿಷಯವಾಗಿ ಮೌನ ವಹಿಸಿದ್ದೀರಿ ಎಂದು ಜಿಲ್ಲಾಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ ಎಂ.ಬಿ. ಪಾಟೀಲ, ಈಗ ಈ ರೀತಿ ನಡೆಯಲ್ಲ, ಇದನ್ನು ನಮ್ಮ ಸರ್ಕಾರ ಸಹಿಸುವ ಪ್ರಶ್ನೆಯೇ ಇಲ್ಲ, ಎಲ್ಲ ವಾರ್ಡಗಳಲ್ಲಿ ಜಾತಿ, ಧರ್ಮ ಯಾವ ಬೇಧವೂ ಇಲ್ಲದೇ ಅಭಿವೃದ್ಧಿ ಕಾಮಗಾರಿ ನಡೆಯಬೇಕು ಇದು ನಮ್ಮ ಸರ್ಕಾರದಲ್ಲಿ ನಡೆಯಲ್ಲ ಎಂದರು.
ಐತಿಹಾಸಿಕ ತಾಜ್ಬಾವಡಿ ಮೊದಲಾದ ಬಾವಿಗಳನ್ನು ಈಗಾಗಲೇ ಪುನರುಜ್ಜೀವನಗೊಳಿಸಲಾಗಿದ್ದು, ಗೃಹಬಳಕೆಯ ಉದ್ದೇಶಕ್ಕೆ ಬಳಸಿದರೆ ಉತ್ತಮ, ಇದರಿಂದ ಕುಡಿಯುವ ನೀರಿನ ಮೇಲೆ ಅವಲಂಬನೆಯ ಒತ್ತಡ ಕಡಿಮೆಯಾಗಲಿದೆ. ಹಲವಾರು ದಾನಿಗಳ ನೆರವು ಪಡೆದು 9 ಕೋಟಿ ರೂ.ಗಳನ್ನು ಐತಿಹಾಸಿಕ ಬಾವಡಿಗಳ ಪುನರುಜ್ಜೀವನ ಮಾಡಲಾಗಿದೆ, ಒಂದು ರೀತಿ ಭೀಕ್ಷೆ ಬೇಡಿ ಹಣ ತಂದಿದ್ದೇನೆ, ಆದರೆ ಉದ್ದೇಶ ಸಫಲವಾಗಿಲ್ಲವೆಂದರೆ ಹೇಗೆ? ಎಂದು ಎಂ.ಬಿ. ಪಾಟೀಲ ಗರಂ ಆದರು.
ನಾಲ್ಕು ವರ್ಷ ಕಳೆದರೂ ಈ ಬಾವಡಿಗಳ ಬಗ್ಗೆ ಯಾರೂ ಯೋಚಿಸಿಲ್ಲ, ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ, ಹೀಗಾದರೆ ಕೋಟಿ ಹಣ ವ್ಯರ್ಥವಾದಂತಾಗಿದೆ ಎಂದು ಅಧಿಕಾರಿಗಳ ಕಾರ್ಯವೈಖರಿಗೆ ಎಂ.ಬಿ. ಪಾಟೀಲ ಅಸಮಾಧಾನ ವ್ಯಕ್ತಪಡಿಸಿ, ನಾನೇ ಖುದ್ದು ಈ ಬಗ್ಗೆ ಪರಿವೀಕ್ಷಣೆ ನಡೆಸುವೆ ಎಂದರು.
ಸಚಿವ ಶಿವಾನಂದ ಪಾಟೀಲ, ಐತಿಹಾಸಿಕ ತಾಜ್ ಬಾವಡಿ ನೀರನ್ನು ಜಿಲ್ಲಾ ಆಸ್ಪತ್ರೆ ಹಾಗೂ ಸೈನಿಕ ಶಾಲೆಗೆ ಪೂರೈಸಿ ಪಂಪ್ ಮಾಡುವ ದೃಷ್ಟಿಯಿಂದ 2.18 ಕೋಟಿ ರೂ. ವ್ಯಯಿಸಲಾಗಿದೆ, ಆದರೆ ಇಂದಿಗೂ ಆ ನೀರು ಬಳಕೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಿಡಿಓಗಳು ಫೋನ್ ಬಂದ್ ಮಾಡಿದ್ದಾರೆ, ಯಾವ ನಂಬರ್ ಆನ್ ಇಲ್ಲ. ತಾಲೂಕಾ ಪಂಚಾಯತ ಇಓಗಳು ಯೂಸ್ಲೆಸ್ ಆಗಿದ್ದಾರೆ, ಸಿಪಾಯಿಗಳೇ ಅವರಿಗೆ ಅಂಜುತ್ತಿಲ್ಲ ಇನ್ನೂ ಪಿಡಿಓ ಅಂತೂ ಬಿಡಿ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಇಓಗಳ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಕುಡಿಯುವ ನೀರು ಪೂರೈಕೆಯಲ್ಲಿ ತಹಶೀಲ್ದಾರರನ್ನು ಹೊಣೆಗಾರರನ್ನಾಗಿ ಮಾಡಿ, ಈ ನಿಟ್ಟಿನಲ್ಲಿ ಕೂಡಲೇ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಬೇಕು ಎಂದು ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಇಓ ಶಿಂಧೆ, ಕೂಡಲೇ ಪಿಡಿಓಗಳಿಗೆ ನೂತನ ನಂಬರ್ಗಳನ್ನು ನೀಡಲಾಗುವುದು, ಕಡ್ಡಾಯವಾಗಿ ಸರ್ಕಾರಿ ಮೊಬೈಲ್ ಸಂಖ್ಯೆಯ ನಂಬರ್ಗಳನ್ನು ಆನ್ ಇರಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದೇನೆ ಎಂದರು.
ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ವಿಠ್ಠಲ ಕಟಕದೊಂಡ, ಅಶೋಕ ಮನಗೂಳಿ, ರಾಜುಗೌಡ ಪಾಟೀಲ ಕುದರಿಸಾಲೋಡಗಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸಂಟ್ ಡಿಸೋಜಾ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಸಿಇಓ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ಅಧೀಕ್ಷಕ ಎಚ್.ಡಿ. ಆನಂದಕುಮಾರ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.