ವಿಜಯಪುರ : ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.40 ರಷ್ಟು ಕಮೀಷನ್ ದಂಧೆಯ ಭಾಗವಾಗಿ ವಿವಿಧ ಟೆಂಡರ್ ಗಳಲ್ಲಿ ಹೆಚ್ಚಿನ ಎಸ್ಟಿಮೇಟ್ ಮಾಡಿ ಟೆಂಡರ್ ಗಾತ್ರ ಹೆಚ್ಚಿಸಿದೆ, ಈ ಎಲ್ಲವೂಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಅಹಿಂದ ಹಾಗೂ ಕಾಂಗ್ರೆಸ್ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.40 ಕಮೀಷನ್ ಹಾವಳಿ ಇದ್ದ ಪರಿಣಾಮ ಕರೆಯಲಾದ ಟೆಂಡರ್ ಗಾತ್ರ ಹೆಚ್ಚಿದೆ, ಏಕೆ ಎಸ್ಟಿಮೇಟ್ ಹೆಚ್ಚಾಯಿತು, ಯಾವ ದರಕ್ಕೆ ಗುತ್ತಿಗೆ ವಹಿಸಲಾಯಿತು ಎಂಬಿತ್ಯಾದಿ ವಿಷಯಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕಳೆದ ಮೂರು ವರ್ಷಗಳಿಂದ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಶೇ.40 ರಷ್ಟು ಕಮೀಷನ್ ಬೇಸತ್ತು ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದರು, ಗುತ್ತಿಗೆದಾರ ಸಂಘದವರು ಪ್ರಧಾನಮಂತ್ರಿಗಳಿಗೆ ದೂರು ನೀಡಿರುವುದನ್ನು ಬಿಜೆಪಿ ಮರೆತಿದೆ ಎಂದರು.
ಕೌಟುಂಬಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಗುತ್ತಿಗೆದಾರ ಎಂದು ಬಿಂಬಿಸುವ ಕಾರ್ಯ ಬಿಜೆಪಿ ಮಾಡುತ್ತಿದೆ, ಅವರ ಹೆಸರಿನಲ್ಲಿ ಲೈಸನ್ಸ್ ಸಹ ಇರಲಿಲ್ಲ, ಆದರೂ ಸಹ ಜನರ ಗಮನ ಬೇರೆಡೆ ಸೆಳೆಯುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದ ಟೆಂಡರ್ ಬಿಲ್ ಪಾವತಿಯಾಗಿಲ್ಲ, ಅದನ್ನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಏಕೆ ಬಿಡುಗಡೆ ಮಾಡಲಿಲ್ಲ ಎಂದು ಪ್ರಶ್ನಿಸಿದ ಎಸ್.ಎಂ.ಪಾಟೀಲ, ಎರಡು ತಿಂಗಳಲ್ಲಿ ಯಾವ ಟೆಂಡರ್ ಪ್ರಕ್ರಿಯೆ ನಡೆಸಿಲ್ಲ ಎಂದರು. ಗುತ್ತಿಗೆದಾರರ ಸಂಘದ ಅಧ್ಯಕ್ಷರು ರಾಜ್ಯ ಸರ್ಕಾರದ ಮೇಲೆ ಯಾವ ಆಪಾದನೆ ಮಾಡಿಲ್ಲ, ಕೇವಲ ಬಿಲ್ ಪಾವತಿಯಾಗುತ್ತಿಲ್ಲ ಎನ್ನುವ ಭಾವನೆ ವ್ಯಕ್ತಪಡಿಸಿದ್ದಾರೆ ಅಷ್ಟೇ ಎಂದರು.
ಕಮೀಷನ್ ಕೇಳುವ ಚಟ ಹೊಂದಿರುವ ಬಿಜೆಪಿ ವಿನಾಕಾರಣ ಕಾಂಗ್ರೆಸ್ ನಾಯಕರ ಮೇಲೆ ಊಹೆ ಮಾಡುತ್ತಿದೆ, ನಮ್ಮ ಸರ್ಕಾರದಲ್ಲಿ ಸದ್ಯ ಯಾವ ಹಗರಣವೂ ಇಲ್ಲ, ಉತ್ತಮ ಆಡಳಿತ ನಡೆಸುತ್ತಿದೆ, ನಮ್ಮದು ಶೇ.೦ ಕಮೀಷನ್ ಸರ್ಕಾರ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನದಿಂದ ಜನರು ಸಂತೋಷವಾಗಿದ್ದಾರೆ, ಇದನ್ನು ಸಹಿಸದೇ ಬಿಜೆಪಿ ಹತಾಶವಾಗಿದೆ ಎಂದರು.
ಇನ್ನೂ ನಗರ ಶಾಸಕ ಬಸನಗೌಡ ಪಾಟೀಲ ಎಲ್ಲಿದ್ದಾರೋ ಗೊತ್ತಿಲ್ಲ, ಅವರನ್ನು ಹುಡುಕಾಡಬೇಕಾಗಿದೆ ಎಂದರು.
ಕೃಷಿ ಸಚಿವರಿಗೆ ಸಂಬಂಧಿಸಿದಂತೆ ಸುಳ್ಳು ಪತ್ರ ಹರಿದಾಡುತ್ತಿದೆ, ಈಗಾಗಲೇ ಸರ್ಕಾರ ಈ ಪ್ರಕರಣವನ್ನು ಸಿಓಡಿ ತನಿಖೆಗೂ ಸಹ ನೀಡಲಾಗಿದೆ, ಇಲಾಖಾ ಅಧಿಕಾರಿಗಳು ಸಹ ಈ ಪತ್ರ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ, ಕೇಂದ್ರದಲ್ಲಿ ಬಿಜೆಪಿ ಹಿಟ್ಲರ್ ಮಾದರಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿದೆ ಎಂದರು.
ಕಾಂಗ್ರೆಸ್ ಧುರೀಣರಾದ ಫಯಾಜ್ ಕಲಾದಗಿ, ವಸಂತ ಹೊನಮೋಡೆ ಮೊದಲಾದವರು ಉಪಸ್ಥಿತರಿದ್ದರು.